ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆತಂಕಕಾರಿ ಮತ್ತು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ತನ್ನ ತಾಯಿಯನ್ನು ಅವಮಾನಿಸಿದ್ದ ವ್ಯಕ್ತಿ ಮತ್ತು ಆತನ ಪುತ್ರಿಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಅಪ್ರಾಪ್ತ ಬಾಲಕನೊಬ್ಬ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಐಡಿಗಳನ್ನು ಸೃಷ್ಟಿಸಿ, ಅಸಭ್ಯ ಸಂದೇಶಗಳ ಮೂಲಕ ಬಾಲಕಿಯರ ಮಾನಹಾನಿ ಮಾಡಿದ್ದಾನೆ. ಇದೀಗ ಆರೋಪಿ ಬಾಲಕನನ್ನು ದೆಹಲಿ ಪೊಲೀಸರ ಸೈಬರ್ ತಂಡ ಬಂಧಿಸಿದೆ.
ಎರಡು ವರ್ಷಗಳಿಂದ ಯುವಕನ ದ್ವೇಷ: 2020ರಲ್ಲಿ ಆರೋಪಿ ಬಾಲಕನ ತಾಯಿ ಮತ್ತು ವ್ಯಕ್ತಿಯೊಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಆ ವ್ಯಕ್ತಿ ತನ್ನ ಇಬ್ಬರು ಪುತ್ರಿಯರೊಂದಿಗೆ ಸೇರಿಕೊಂಡು ತಾಯಿಯನ್ನು ಅವಮಾನಿಸಿದ್ದರು. ಅಂದಿನಿಂದ ಎಂದರೆ ಕಳೆದ ಎರಡು ವರ್ಷಗಳಿಂದಲೂ ಆ ವ್ಯಕ್ತಿ ಮತ್ತು ಆತನ ಪುತ್ರಿಯರ ಮೇಲೆ ಬಾಲಕ ದ್ವೇಷ ಸಾಧಿಸುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಬಾಲಕಿಯರ ನಕಲಿ ಐಡಿ ಸೃಷ್ಟಿಸಿ ಮಾನಹಾನಿ: ಇತ್ತೀಚೆಗೆ ಬಾಲಕಿಯೊಬ್ಬರು ತನ್ನ ಮತ್ತು ತನ್ನ ಸಹೋದರಿಯ ಹೆಸರಿನಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಐಡಿಗಳನ್ನು ಸೃಷ್ಟಿಸಿದ್ದಾರೆ. ಅಲ್ಲದೇ, ತಮ್ಮ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ಕಿರುಕುಳ ನೀಡಲಾಗುತ್ತಿದೆ. ಜೊತೆಗೆ ಇನ್‌ಸ್ಟಾಗ್ರಾಮ್ ಐಡಿಗಳಿಂದ ಅಸಭ್ಯ ಸಂದೇಶಗಳನ್ನು ಸಹ ರವಾನಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ನಕಲಿ ಐಡಿ ಪತ್ತೆ ಹಚ್ಚಿದ್ದೇಗೆ?: ಬಾಲಕಿಯ ದೂರಿನ ಮೇರೆಗೆ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆಗ ಸಹೋದರಿಯರ ಹೆಸರಲ್ಲಿ ಸೃಷ್ಟಿಯಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಕಲಿ ಐಡಿಗಳ ಮತ್ತು ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದ ಐಡಿಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಫೇಕ್ ಫೇಸ್‌ಬುಕ್ ಐಡಿ; 14 ಲಕ್ಷ ರೂ. ದೋಚಿದ 'ಸುಶ್ಮಾ' !
ಈ ನಂತರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗಳು ಸೃಷ್ಟಿ ಮಾಡಲು ಬಳಸಲಾದ ಐಪಿ (ಇಂಟರ್ನೆಟ್ ಪ್ರೋಟೋಕಾಲ್) ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಮತ್ತಿತರ ವಿವರಗಳನ್ನು ಪೊಲೀಸರು ಹೊರ ತೆಗೆದಿದ್ದಾರೆ. ಅಲ್ಲದೇ, ಈ ಐಪಿ ವಿಳಾಸಗಳ ಮತ್ತಷ್ಟು ವಿವರಗಳನ್ನು ಸಂಬಂಧಪಟ್ಟ ಮೊಬೈಲ್ ಆಪರೇಟರ್‌ಗಳನ್ನು ಸಂಪರ್ಕಿಸಿ, ಅಲ್ಲಿಂದಲೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಇದರಿಂದ ನಕಲಿ ಐಡಿಗಳಿಗೆ ಬಳಸಲಾದ ಮೊಬೈಲ್ ಸಂಖ್ಯೆ ಮತ್ತು ಐಎಂಇಐ ಸಂಖ್ಯೆ ಪತ್ತೆಯಾಗಿದ್ದು, ಅಲ್ಲಿಂದ ಆರೋಪಿಯ ಗುರುತನ್ನು ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ.
ಆರೋಪಿ ಬಾಲಕ ಬಾಯ್ಬಿಟ್ಟ ಸತ್ಯ: ಗುರುತು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಕೊನೆಗೂ ಆರೋಪಿ ಬಾಲಕನನ್ನು ಹಿಡಿದು ಬಂಧಿಸಿದ್ದಾರೆ. ನಂತರ ಆ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸತ್ಯವನ್ನು ಬಾಯ್ಬಿಟ್ಟಿದ್ದಾನೆ. 2020ರಲ್ಲಿ ನನ್ನ ತಾಯಿಯೊಂದಿಗೆ ಬಾಲಕಿಯರ ತಂದೆ ಜಗಳವಾಡಿದ್ದಳು. ಈ ವೇಳೆ ನನ್ನ ತಾಯಿಯನ್ನು ಆ ವ್ಯಕ್ತಿ ಮತ್ತು ಆತನ ಪುತ್ರಿಯರು ನಿಂದಿಸಿದ್ದರು ಎಂಬುವುದಾಗಿ ಆರೋಪಿ ಬಾಲಕ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಉತ್ತರ ದೆಹಲಿಯ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಸಾಗರ್ ಸಿಂಗ್ ಕಲ್ಸಿ ಮಾಹಿತಿ ನೀಡಿದ್ದಾರೆ.
ತಾಯಿಗೆ ನಿಂದಿಸಿದ್ದ ಕುರಿತ ಸೇಡು ತೀರಿಸಿಕೊಳ್ಳಲು ನಿರ್ಧರಿಸಿ ನಕಲಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಐಡಿಗಳನ್ನು ಸೃಷ್ಟಿಸಿದ್ದೆ. ಅಲ್ಲದೇ, ಇನ್‌ಸ್ಟಾಗ್ರಾಮ್‌ನಲ್ಲಿ ಬಾಲಕಿಯರ ಪ್ರೊಫೈಲ್‌ಗಳನ್ನು ಫಾಲೋ ಮಾಡುತ್ತಿದ್ದೆ. ಅಲ್ಲಿಂದಲೇ ಅವರಿಬ್ಬರ ಫೋಟೋಗಳು ಮತ್ತು ವಿಡಿಯೋಗಳನ್ನು ತೆಗೆದುಕೊಂಡು ಅವುಗಳನ್ನು ನಕಲಿ ಐಡಿಯಲ್ಲಿ ಪೋಸ್ಟ್ ಮಾಡುತ್ತಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಅಂತಾ ವಿವರಿಸಿದ್ದಾರೆ.
ಹಲವು ಫೇಕ್ ಐಡಿ, 2 ಮಾತ್ರ ಚಾಲ್ತಿ: ಆರೋಪಿಯು ಇಬ್ಬರು ಸಹೋದರಿಯರ ಹಲವಾರು ಐಡಿಗಳನ್ನು ಸೃಷ್ಟಿ ಮಾಡಿದ್ದ. ಇದೀಗ, ಕೇವಲ ಎರಡು ಫೇಸ್‌ಬುಕ್ ಐಡಿಗಳು ಮಾತ್ರ ಚಾಲ್ತಿಯಲ್ಲಿವೆ. ಇತ್ತೀಚೆಗೆ ಕೂಡ ಬಾಲಕಿಯರೊಂದಿಗೆ ಇನ್‌ಸ್ಟಾಗ್ರಾಮ್ ಐಡಿಯಲ್ಲಿ ಚಾಟ್ ಮಾಡಿದ್ದು, ಅದರಲ್ಲಿ ಅಸಭ್ಯ ಸಂದೇಶಗಳನ್ನು ಬರೆದಿರುವುದು ಪತ್ತೆಯಾಗಿದೆ ಎಂದು ಡಿಸಿಪಿ ಕಲ್ಸಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಂತಾರಾಜ್ಯ ಪ್ರೇಮ: ಫೇಸ್‌ಬುಕ್ ಗೆಳೆಯನ ಭೇಟಿಗೆ ಬಂದು ಶವವಾದ ಯುವತಿ