ಕೊಲ್ಹಾಪುರ (ಮಹಾರಾಷ್ಟ್ರ): ಪರಸ್ಪರ ಪ್ರೀತಿಸುತ್ತಿದ್ದ ಯುವಕ-ಯುವತಿ ಇಬ್ಬರೂ ಆತ್ಮಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಇವರಿಬ್ಬರೂ ಕೂಡ ಅಪ್ರಾಪ್ತರಾಗಿದ್ದು, ಇವರ ಪ್ರೀತಿಗೆ ಎರಡೂ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಈ ಜೋಡಿ ಸಾವಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಕೂಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಶಿರೋಲಿ ಪುಲಚಿಯಲ್ಲಿ ವಾಸವಿದ್ದ ಯುವಕ ಅದೇ ಪ್ರದೇಶದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ, ಈ ಸಂಬಂಧ ಇಬ್ಬರ ಕುಟುಂಬದವರಿಂದಲೂ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 7.30ರ ಸುಮಾರಿಗೆ ಯುವಕನ ಮನೆಯಲ್ಲಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸಂಬಂಧಿಕರು ಗಮನಿಸಿದ್ದಾರೆ. ಕೂಡಲೇ ಇಬ್ಬರನ್ನೂ ಕೊಲ್ಹಾಪುರದ ಸಿಪಿಆರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: ರಾತ್ರಿ ಫೋನ್ನಲ್ಲಿ ಜಗಳ: ಊರಲ್ಲಿ ಗೆಳತಿ ನೇಣಿಗೆ ಶರಣು, ವಿಷಯ ತಿಳಿದು 8ನೇ ಮಹಡಿಯಿಂದ ಜಿಗಿದ ಪ್ರಿಯಕರ!
ಮೃತ ಯುವಕ-ಯುವತಿಯ ಇಬ್ಬರ ತಂದೆಯಂದಿರು ಒಳ್ಳೆಯ ಸ್ನೇಹಿತರು. ಇಬ್ಬರು ಕುಟುಂಬಗಳಿಗೆ ಭಿನ್ನ ಹಿನ್ನೆಲೆಯಿದ್ದರೂ ಒಬ್ಬೊಬ್ಬರ ಮನೆಗೆ ಒಬ್ಬರು ಬಂದು ಹೋಗುತ್ತಿದ್ದರು. ಹೀಗಾಗಿ ಎರಡು ಕುಟುಂಬಗಳ ನಡುವೆ ಉತ್ತಮ ಸಂಬಂಧ ಇತ್ತು. ಇದರಿಂದಲೇ ಇಬ್ಬರ ನಡುವೆ ಪ್ರೇಮ ಆರಂಭವಾಗಿತ್ತು. ಆದರೆ, ಇಬ್ಬರ ಮಧ್ಯೆ ಪ್ರೀತಿ ಬೆಳೆಯಲು ಶುರುವಾದ ನಂತರ ಈ ಸಂಬಂಧಕ್ಕೆ ಕುಟುಂಬಸ್ಥರಿಂದ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್: ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಯುವಕನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಾಕಿರುವುದು ಬೆಳಕಿಗೆ ಬಂದಿದೆ. ''ಯಾರನ್ನು ಪ್ರೀತಿಸಿದರೆ ಅವರ ಜೊತೆಗೆ ಸಾಯಲು ಸಿದ್ಧರಾಗಿರಿ.. ಪ್ರೀತಿಸುವಾಗ ಜಾತಿ, ಧರ್ಮ ನೋಡಬೇಡಿ'' ಎಂಬ ಸ್ಟೇಟಸ್ ಇಡಲಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಜೋಡಿ ಆತ್ಮಹತ್ಯೆ ಪ್ರಕರಣದ ನಂತರ ಶಿರೋಲಿ ಪುಲಚಿಯಲ್ಲಿ ಎರಡು ಕುಟುಂಬಗಳ ಸದಸ್ಯರಲ್ಲಿ ನೀರವ ಮೌನ ಆವರಿಸಿದ್ದರೆ, ಎರಡು ಗುಂಪುಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ.
ವಿಜಯಪುರ ಜೋಡಿ ಆತ್ಮಹತ್ಯೆ ಪ್ರಕರಣ: ಕಳೆದ ಮೈ ತಿಂಗಳಲ್ಲಿ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲೂ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿತ್ತು. 17 ವರ್ಷದ ಹುಡುಗ ಹಾಗೂ 15 ವರ್ಷದ ಬಾಲಕಿ ಇಬ್ಬರೂ ಪ್ರೇಮದ ಬಲೆಯಲ್ಲಿ ಬಿದ್ದಿದ್ದರು. ಆದರೆ, ಮೇ 2ರಂದು ಮನೆಯಿಂದ ಹೊರ ಹೋಗುವುದಾಗಿ ಹೇಳಿ ಹೋಗಿದ್ದ ಈ ಜೋಡಿ ನಂತರ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಕುರಿತು ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ವಿಜಯಪುರದಲ್ಲಿ ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಆತ್ಮಹತ್ಯೆ