ಚಿಂದ್ವಾರ್ (ಮಧ್ಯಪ್ರದೇಶ) : ರಾಜ್ಯದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅತ್ಯಾಚಾರ ಆರೋಪಿಯ ವಿರುದ್ಧ ದೂರು ನೀಡಲು ಹೋಗಿದ್ದ 14 ವರ್ಷದ ಬಾಲಕಿ ಪೊಲೀಸ್ ಠಾಣೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಚಿಂದ್ವಾರ್ ಜಿಲ್ಲೆಯ ಕುಂದೀಪುರ್ನಲ್ಲಿ ನಡೆದಿದೆ.
ಹೆರಿಗೆ ಮಾಡಿಸಿದ ಮಹಿಳಾ ಪೊಲೀಸ್ ಅಧಿಕಾರಿ..
ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು 14 ವರ್ಷದ ಬಾಲಕಿ ಮಂಗಳವಾರ ಸಂಜೆ ಕಂದೀಪುರ್ ಪೊಲೀಸ್ ಠಾಣೆಗೆ ಬಂದಿದ್ದಳು. ಈ ವೇಳೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಠಾಣೆಯ ಮಹಿಳಾ ಅಧಿಕಾರಿ ಇತರ ಮಹಿಳಾ ಸಿಬ್ಬಂದಿಯ ಸಹಾಯದೊಂದಿಗೆ ಠಾಣೆಯ ಖಾಲಿ ಕೋಣೆಯಲ್ಲಿ ಬಾಲಕಿಗೆ ಹೆರಿಗೆ ಮಾಡಿಸಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ..
ಘಾಟ್ ಪರಾಸಿಯಾ ನಿವಾಸಿ ಆಕಾಶ್ ಎಂಬಾತ ಮದುವೆಯಾಗುವುದಾಗಿ ನಂಬಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕಳೆದ 9 ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು. ಆದರೆ, ಇತ್ತೀಚೆಗೆ ಆರೋಪಿ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಬೇಸತ್ತ ಬಾಲಕಿ ಆತನ ವಿರುದ್ಧ ಆತ್ಯಾಚಾರ ಪ್ರಕರಣ ದಾಖಲಿಸಲು ಠಾಣೆಗೆ ಆಗಮಿಸಿದ್ದಳು ಎಂದು ಮಹಿಳಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸಂತ್ರಸ್ತೆಯ ದೂರಿನ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಸೇರಿದಂತೆ ಇತರ ಕಾಯ್ದೆಗಳಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಹೆರಿಗೆಯಾದ ಬಳಿಕ ಬಾಲಕಿ ಮತ್ತು ಮಗುವನ್ನು ಜಿಲ್ಲಾಸ್ಪತ್ರೆಯ ಸ್ತ್ರೀರೋಗ ವಾರ್ಡ್ಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: Pornography case: ರಾಜ್ ಕುಂದ್ರಾ ಕಂಪನಿಯ 3-4 ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲು