ನವದೆಹಲಿ: ಕೇಂದ್ರ ದೆಹಲಿಯ ಔರಂಗಾಜೇಬ್ ರಸ್ತೆಯಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟ ಸಂಭವಿಸಿದೆ. ಇದರ ತೀವ್ರತೆಗೆ 4 ರಿಂದ 5 ಕಾರುಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿಯಾಗಿಲ್ಲ. ದೆಹಲಿ ಪೊಲೀಸರ ವಿಶೇಷ ತಂಡ ಸ್ಥಳದಲ್ಲಿ ಬಿಡುಬಿಟ್ಟಿದ್ದು ತನಿಖೆ ನಡೆಸುತ್ತಿದೆ.
ಗಣರಾಜ್ಯೋತ್ಸವ ಸಮಾರೋಪ ಸಮಾರಂಭ (ಬೀಟಿಂಗ್ ರಿಟ್ರೀಟ್) ಕಾರ್ಯಕ್ರಮ ನಡೆಯುತ್ತಿದ್ದ ವಿಜಯ್ ಚೌಕ್ನಿಂದ ಕೇವಲ ಎರಡು ಕಿಲೋ ಮೀಟರ್ ದೂರದಲ್ಲಿ ಇಸ್ರೇಲ್ ರಾಯಭಾರ ಕಚೇರಿ ಇದೆ. ಇದೇ ಪ್ರದೇಶದಲ್ಲಿ ಸ್ಫೋಟ ನಡೆದಿದೆ.
ಜಿಂದಾಲ್ ಹೌಸ್ ಪಕ್ಕದ ರಸ್ತೆಯ ರಸ್ತೆ ಡಿವೈಡರ್ ಬಳಿ ಹೂಕುಂಡದಲ್ಲಿ ಸ್ಫೋಟಕವನ್ನು ಇಡಲಾಗಿದೆ. ಇದನ್ನು ಚಲಿಸುತ್ತಿರುವ ವಾಹನದಿಂದ ಎಸೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜಗತ್ತಿನ ಅನೇಕ ರಾಯಭಾರ ಕಚೇರಿಗಳು ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿದೆ. ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿನ ಭದ್ರತೆ ಬಗ್ಗೆ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸ್ ಆಯುಕ್ತರು ಮತ್ತು ಗುಪ್ತಚರ ಸಂಸ್ಥೆ ಮುಖ್ಯಸ್ಥರೊಂದಿಗೆ ಕಳೆದ ಕೆಲ ದಿನಗಳ ಹಿಂದೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಈ ಘಟನೆ ಸಂಭವಿಸಿದೆ.