ನವದೆಹಲಿ: ಪ್ರಸ್ತುತ ಆದಾಯ ತೆರಿಗೆ ಶ್ರೇಣಿ (ತೆರಿಗೆ ಸ್ಲಾಬ್) ಮತ್ತು ಜಿಎಸ್‌ಟಿಯಿಂದ ವಿನಾಯಿತಿ ಪಡೆದ ವಸ್ತುಗಳನ್ನು ಪರಿಶೀಲಿಸಲು ರಾಜ್ಯ ವಿತ್ತ ಸಚಿವರನ್ನೊಳಗೊಂಡ ಎರಡು ಸಮಿತಿಯನ್ನು ಕೇಂದ್ರ ಹಣಕಾಸು ಸಚಿವಾಲಯ ರಚಿಸಿದೆ.
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ 7 ಸದಸ್ಯರನ್ನೊಳಗೊಂಡ ಮೊದಲ ಸಮಿತಿಯಲ್ಲಿ ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಮಿತ್ ಮಿತ್ರ, ಕೇರಳ ಹಣಕಾಸು ಸಚಿವ ಕೆ ಎನ್ ಬಾಲಗೋಪಾಲ್, ಬಿಹಾರ ಉಪಮುಖ್ಯಮಂತ್ರಿ ತರ್ಕಿಶೋರ್ ಪ್ರಸಾದ್ ಕೂಡ ಇರಲಿದ್ದಾರೆ. ಇವರು ಎರಡು ತಿಂಗಳಲ್ಲಿ ವರದಿ ಸಲ್ಲಿಸಲಿದ್ದಾರೆ.
ಅಲ್ಲದೇ ಈ ಸಮಿತಿಯು ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ)ಯ ಅಡಿಯಲ್ಲಿ ವಿನಾಯಿತಿ ಪಡೆದ ಸರಕು ಮತ್ತು ಸೇವೆಗಳ ಪೂರೈಕೆಯನ್ನು ಪರಿಶೀಲಿಸುತ್ತದೆ. ತೆರಿಗೆ ಸ್ಲಾಬ್ ವಿಲೀನ ಸೇರಿ ಅದನ್ನು ತರ್ಕಬದ್ಧಗೊಳಿಸುವ ಕ್ರಮಗಳನ್ನು ಶಿಫಾರಸು ಮಾಡುತ್ತದೆ. ಹಾಗೆಯೇ, ಐಟಿ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಇನ್ಮುಂದೆ ಸ್ವಿಗ್ಗಿ,ಜೊಮ್ಯಾಟೊ GST ಪಾವತಿಸಬೇಕು: ಆದ್ರೆ, ಆರ್ಡರ್ ಮಾಡುವ ಗ್ರಾಹಕರಿಗಿಲ್ಲ ತೊಂದರೆ
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ 8 ಸದಸ್ಯರನ್ನೊಳಗೊಂಡ 2ನೇ ಸಮಿತಿಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಮತ್ತು ಛತ್ತೀಸ್‌ಗಢ ಹಣಕಾಸು ಸಚಿವ ಟಿ ಎಸ್ ಸಿಂಗ್ ದೇವ ಇರಲಿದ್ದಾರೆ.
ಈ ಸಮಿತಿಯು ಐಟಿ ಪರಿಕರಗಳನ್ನು ಮತ್ತು ತೆರಿಗೆದಾರರಿಗೆ ಲಭ್ಯವಿರುವ ಇಂಟರ್ಫೇಸ್ ಅನ್ನು ಪರಿಶೀಲಿಸುತ್ತದೆ ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಮಾರ್ಗಗಳನ್ನು ಸೂಚಿಸುತ್ತದೆ. ಉತ್ತಮ ತೆರಿಗೆ ಅನುಸರಣೆಗೆ ಡೇಟಾ ವಿಶ್ಲೇಷಣೆಯ ಸಂಭಾವ್ಯ ಬಳಕೆ ಗುರುತಿಸುತ್ತದೆ ಮತ್ತು ಕೇಂದ್ರ ಮತ್ತು ರಾಜ್ಯ ತೆರಿಗೆ ಅಧಿಕಾರಿಗಳ ನಡುವೆ ಉತ್ತಮ ಸಮನ್ವಯದ ಮಾರ್ಗಗಳನ್ನು ಸೂಚಿಸುತ್ತದೆ.
ಸೆಪ್ಟೆಂಬರ್ 17ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಎರಡು ಸಮಿತಿಗಳನ್ನು ಸ್ಥಾಪಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿತು.