ನವದೆಹಲಿ: ಪಾಕಿಸ್ತಾನ ಹಾಗೂ ಐಎಸ್ಐ ಮೇಲೆ ಈ ಹಿಂದಿನಿಂದಲೂ ಕಾಂಗ್ರೆಸ್ಗೆ ಪ್ರೀತಿ ಇರುವ ವಿಷಯ ಎಲ್ಲರಿಗೂ ಗೊತ್ತಿದೆ. ಪಂಜಾಬ್ ಸರ್ಕಾರಕ್ಕೆ ಗೊತ್ತಿಲ್ಲದೇ ಪ್ರಧಾನಿ ಅವರನ್ನು ಇಷ್ಟೊಂದು ದೊಡ್ಡ ಅಪಾಯಕ್ಕೆ ಸಿಲುಕಿಸಲು ಸಾಧ್ಯವೇ ಇಲ್ಲ. ಇದೊಂದು ಯೋಜಿತ ಪಿತೂರಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ರಾಜ್ಯದಲ್ಲಿ ಪ್ರಧಾನಿಯವರನ್ನು 20 ನಿಮಿಷಗಳ ಕಾಲ ಭದ್ರತೆ ಇಲ್ಲದೇ ನಿಲ್ಲಿಸುವುದು ದೊಡ್ಡ ಪಿತೂರಿಯಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇದಕ್ಕೆ ಸೂಕ್ತ ಬೆಲೆ ತೆರಲಿದೆ ಎಂದರು.
ಒಂದು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದಾಗ ಅವರ ಸಂಪೂರ್ಣ ರಕ್ಷಣೆಯ ರಾಜ್ಯ ಸರ್ಕಾರದ್ದಾಗಿರುತ್ತದೆ. ಆದರೆ ಪಂಜಾಬ್ ಸರ್ಕಾರ ಭದ್ರತೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ 20 ನಿಮಿಷಗಳ ಕಾಲ ರಸ್ತೆಯಲ್ಲಿ ನಿಲ್ಲುವಂತೆ ಮಾಡಿದೆ. ಕಾಂಗ್ರೆಸ್‌ನ ಈ ಕೃತ್ಯ ನಾಚಿಕೆಗೇಡು ಎಂದರು.
ಇದನ್ನೂ ಓದಿ: ವಿಡಿಯೋ: ಪಲ್ಟಿಯಾದ ಟ್ರಕ್‌ನಿಂದ ಮೇಕೆ ಹೊತ್ತೊಯ್ಯಲು ಮುಗಿಬಿದ್ದ ಜನ
ಪಂಜಾಬ್ನ ಫಿರೋಜ್ಪುರ್ನಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಭಾಗಿಯಾಗಲು ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಅನುಭವಿಸಿದ್ದು, ಸುಮಾರು 15 ರಿಂದ 20 ನಿಮಿಷಗಳ ಕಾಲ ಫ್ಲೈಓವರ್ನಲ್ಲೇ ಕಾಲ ಕಳೆದಿದ್ದರು.