ನವದೆಹಲಿ: ಸತತ ಎರಡನೇ ಬಾರಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಮರು ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೇ 5 ವರ್ಷಗಳ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿರುವ ಗುಟೆರೆಸ್‌ಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.
ತಮ್ಮೊಂದಿಗೆ ಜೊತೆಗೂಡಿ ಸುಧಾರಿತ ಬಹುಪಕ್ಷೀಯ ಮಾತುಕತೆಗಳನ್ನು ಮುನ್ನಡೆಸಲು ಎದುರು ನೋಡುತ್ತಿದ್ದೇವೆ ಎಂದು ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಂಟೋನಿಯೊ ಗುಟೆರೆಸ್ ಸತತ ಎರಡನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. 5 ವರ್ಷಗಳ ಎರಡನೇ ಅವಧಿ ಜನವರಿ 1, 2022ರಿಂದ ಪ್ರಾರಂಭವಾಗಿ 2026ರ ಡಿಸೆಂಬರ್ 31ರಂದು ಕೊನೆಗೊಳ್ಳಲಿದೆ.
ಇದನ್ನೂ ಓದಿ: ಎಲ್‌ಜೆಪಿ ಬಿಕ್ಕಟ್ಟು ಬೆನ್ನಲ್ಲೇ ಚಿರಾಗ್ ಪಾಸ್ವಾನ್‌ರದ್ದು ಎನ್ನಲಾದ ಆಡಿಯೋ ಭಾರೀ ವೈರಲ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 75ನೇ ಅಧಿವೇಶನದ ಅಧ್ಯಕ್ಷ ವೊಲ್ಕಾನ್ ಬೊಜ್ಕಿರ್, ಗುಟೆರೆಸ್ ಅವರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತೆ ನೇಮಕ ಮಾಡಲಾಗಿದೆ ಎಂದು ಘೋಷಿಸಿದ್ದರು. ಜೂನ್ 8ರಂದು 15 ಸದಸ್ಯರ ಕೌನ್ಸಿಲ್ ಸಭೆಯಲ್ಲಿ ಸರ್ವಾನುಮತದಿಂದ ಗುಟೆರೆಸ್ ಅವರ ಹೆಸರನ್ನು ಶಿಫಾರಸು ಮಾಡುವ ನಿರ್ಣಯವನ್ನು ಅಂಗೀಕರಿಸಲಾಗಿತ್ತು.