ಮಹಾರಾಷ್ಟ್ರ: ರಾಜ್ಯದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡಲು ವಲಸೆ ಕಾರ್ಮಿಕರೇ ಕಾರಣವೆಂದು ಮಹಾರಾಷ್ಟ್ರ ನವ ನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಮಹಾರಾಷ್ಟ್ರವು ದೇಶದಲ್ಲೇ ಅತಿ ಹೆಚ್ಚು ಕೈಗಾರಿಕೆಗಳನ್ನೊಳಗೊಂಡ ರಾಜ್ಯವಾಗಿದೆ. ಹೀಗಾಗಿ ಇದು ಇತರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಆಕರ್ಷಿಸುತ್ತದೆ. ಈ ಕಾರ್ಮಿಕರಿಗೆ ಕೋವಿಡ್ ಪರೀಕ್ಷೆ ಮಾಡುವಲ್ಲಿ ಸಾಕಷ್ಟು ಕೊರೆತೆಗಳಿವೆ ಎಂದು ಹೇಳಿದ್ರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿಕೊಂಡು ಜಿಮ್ಗಳು ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಸಿಎಂ ಉದ್ಧವ್ ಠಾಕ್ರೆ ಬಳಿ ಮನವಿ ಮಾಡಿರುವುದಾಗಿಯೂ ತಿಳಿಸಿದ್ರು.
ಮಹಾರಾಷ್ಟ್ರದಲ್ಲಿ ಸೋಮವಾರ ರಾತ್ರಿಯಿಂದ ವಿಧಿಸಲಾಗಿರುವ ಹೊಸ ನಿರ್ಬಂಧಗಳ ಕುರಿತು ಮಾತನಾಡುತ್ತಾ, ರಾಜ್ಯ ಸರ್ಕಾರ ಅಗತ್ಯ ಸೇವೆಗಳ ಅಂಗಡಿಗಳು, ಮೆಡಿಕಲ್ಗಳನ್ನು ಹೊರತುಪಡಿಸಿ ಕಿರಾಣಿ ಅಂಗಡಿಗಳು, ಎಲ್ಲಾ ಇತರ ಅಂಗಡಿಗಳು, ಮಾರುಕಟ್ಟೆಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಏಪ್ರಿಲ್ 30 ರವರೆಗೆ ಮುಚ್ಚಲಾಗುವುದು ಎಂದು ಹೇಳಿದೆ. ಆದರೆ ಈ ಎಲ್ಲಾ ಅಂಗಡಿಗಳನ್ನು ಕನಿಷ್ಠ ಎರಡು ಅಥವಾ ಮೂರು ದಿನಗಳವರೆಗೆ ತೆರೆಯಲು ಅವಕಾಶ ನೀಡಬೇಕೆಂದು ಹೇಳಿದರು.
ಕೊರೊನಾ ಲಾಕ್ಡೌನ್ನಿಂದಾಗಿ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರು ವಿದ್ಯುತ್ ಬಿಲ್ಗಳನ್ನು ಏಕೆ ಪಾವತಿಸಬೇಕು? ಎಂದು ರಾಜ್ ಠಾಕ್ರೆ ಪ್ರಶ್ನಿಸಿದ್ರು.
ಅನಿಲ್ ದೇಶ್ಮುಖ್ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿ ಹೋಟೆಲ್, ರೆಸ್ಟೋರೆಂಟ್ಗಳಿಂದ ತಿಂಗಳಿಗೆ 100 ಕೋಟಿ ರೂ. ವಸೂಲಿ ಮಾಡಿ ಎಂದು ಪೊಲೀಸ್ ಅಧಿಕಾರಿಗೆ ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.