ನವದೆಹಲಿ: ಮೈಕ್ರೊಸಾಫ್ಟ್ನ ಸಹ-ಸಂಸ್ಥಾಪಕ ಮತ್ತು ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ಗೇಟ್ಸ್ ತಮ್ಮ 48 ವರ್ಷಗಳ ಹಳೆಯ ರೆಸ್ಯೂಮ್ ಒಂದನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್ಇನ್ನಲ್ಲಿ ಗೇಟ್ಸ್ ಶೇರ್ ಮಾಡಿರುವ ರೆಸ್ಯೂಮ್ ಬಗ್ಗೆ ಈಗ ಯುವಸಮುದಾಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಿದೆ.
"ನಿಮ್ಮಲ್ಲಿ ಯಾರಾದರೂ ಇತ್ತೀಚೆಗೆ ಪದವಿ ಶಿಕ್ಷಣ ಮುಗಿಸಿರಬಹುದು ಅಥವಾ ಕಾಲೇಜ್ ಡ್ರಾಪ್ ಔಟ್ ಇರಬಹುದು. ಖಂಡಿತವಾಗಿಯೂ ನಿಮ್ಮ ರೆಸ್ಯೂಮ್ ನನ್ನ ಈ 48 ವರ್ಷದ ರೆಸ್ಯೂಮ್ಗಿಂತ ಚೆನ್ನಾಗಿರುತ್ತದೆ ಅಂದುಕೊಳ್ಳುತ್ತೇನೆ." ಎಂದು ಬಿಲ್ ಗೇಟ್ಸ್ ತಮ್ಮ ಪೋಸ್ಟ್ಗೆ ಕ್ಯಾಪ್ಷನ್ ನೀಡಿದ್ದಾರೆ.
ನೌಕರಿ ಹುಡುಕುವಲ್ಲಿ ರೆಸ್ಯೂಮ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ರೆಸ್ಯೂಮ್ ಚೆನ್ನಾಗಿರದಿದ್ದರೆ ಇಂಟರ್ವ್ಯೂ ಬರುವ ಮೊದಲೇ ರಿಜೆಕ್ಟ್ ಆಗಿ ಬಿಡುತ್ತದೆ. ಹೀಗಾಗಿ ಬಿಲ್ ಗೇಟ್ಸ್ ಅವರ ರೆಸ್ಯೂಮ್ನಿಂದ ನೀವು ಸಾಕಷ್ಟು ತಿಳಿದುಕೊಳ್ಳಬಹುದು ಅನಿಸುತ್ತದೆ.
1974ರಲ್ಲಿ ಬರೆಯಲಾದ ರೆಸ್ಯೂಮ್ನಲ್ಲಿ ಬಿಲ್ ಗೇಟ್ಸ್ ಅವರ ಹೆಸರನ್ನು ವಿಲಿಯಂ ಹೆಚ್. ಗೇಟ್ಸ್ ಎಂದು ಬರೆಯಲಾಗಿದೆ. ಗೇಟ್ಸ್ ಆ ಸಮಯದಲ್ಲಿ ಹಾರ್ವರ್ಡ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದರು. ಆಪರೇಟಿಂಗ್ ಸಿಸ್ಟಂ ಸ್ಟ್ರಕ್ಚರ್, ಡೇಟಾಬೇಸ್ ಮ್ಯಾನೇಜಮೆಂಟ್, ಕಂಪೈಲರ್ ಕನ್ಸ್ಟ್ರಕ್ಷನ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಮುಂತಾದ ಕೋರ್ಸ್ಗಳನ್ನು ಮಾಡಿರುವುದಾಗಿ ರೆಸ್ಯೂಮ್ನಲ್ಲಿ ಬರೆಯಲಾಗಿದೆ. FORTRAN, COBOL, ALGOL, BASIC ಸೇರಿದಂತೆ ಎಲ್ಲ ಪ್ರಮುಖ ಪ್ರೊಗ್ರಾಮಿಂಗ್ ಲ್ಯಾಂಗ್ವೇಜ್ಗಳ ಅನುಭವವಿದೆ ಎಂದು ರೆಸ್ಯೂಮ್ನಲ್ಲಿ ತಿಳಿಸಲಾಗಿದೆ.
ಇದಲ್ಲದೆ 1973 ರಲ್ಲಿ ಟಿಆರ್ಡಬ್ಲ್ಯೂ ಸಿಸ್ಟಮ್ಸ್ ಗ್ರೂಪ್ ಜೊತೆ ಸಿಸ್ಟಮ್ ಪ್ರೊಗ್ರಾಮರ್ ಆಗಿ ಕೆಲಸ ಮಾಡಿದ್ದನ್ನೂ ಅವರು ದಾಖಲಿಸಿದ್ದಾರೆ. 1972ರಲ್ಲಿ ಲೇಕಸೈಡ್ ಸ್ಕೂಲ್, ಸಿಯಾಟಲ್ನಲ್ಲಿ ಗುತ್ತಿಗೆ ಆಧಾರದಲ್ಲಿ ಕೋ-ಲೀಡರ್ ಮತ್ತು ಕೋ-ಪಾರ್ಟನರ್ ಆಗಿ ಕೆಲಸ ಮಾಡಿರುವ ಅನುಭವದ ಮಾಹಿತಿ ಕೂಡ ರೆಸ್ಯೂಮ್ನಲ್ಲಿದೆ.
ಬಿಲ್ ಗೇಟ್ಸ್ ಅವರಂಥ ಪ್ರಭಾವಿ ಹಾಗೂ ಪ್ರೇರಣಾತ್ಮಕ ವ್ಯಕ್ತಿಯ ರೆಸ್ಯೂಮ್ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.