ಪುಣೆ (ಮಹಾರಾಷ್ಟ್ರ): ಪಿಂಪ್ರಿ ಚಿಂಚ್‌ವಾಡ್ ನಗರದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಅವರು ಆನ್‌ಲೈನ್ ಗೇಮಿಂಗ್ನಲ್ಲಿ 1.5 ಕೋಟಿ ಬಹುಮಾನ ಗೆದ್ದಿದ್ದರು. ಆದರೆ, ಸದ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ''ಕರ್ತವ್ಯದ ವೇಳೆ ಆನ್‌ಲೈನ್ ಗೇಮಿಂಗ್ನಲ್ಲಿ ತೋಡಗಿದ್ದ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿ ಬಿಜೆಪಿ ಮುಖಂಡ ಅಮೋಲ್ ಥೋರಟ್, ಗೃಹ ಸಚಿವ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ.
ಪಿಎಸ್ಐ ಸೋಮನಾಥ್ ಝೆಂಡೆ ಅವರನ್ನು ಪಿಂಪ್ರಿ ಚಿಂಚ್ವಾಡ್ ಪೊಲೀಸ್ ಹೆಡ್ಕ್ವಾರ್ಟರ್ಸ್ನಲ್ಲಿ ಆರ್ಸಿಪಿಯಲ್ಲಿ ನಿಯೋಜಿಸಲಾಗಿದೆ. ಮಂಗಳವಾರ ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್‌ನ ಕ್ರಿಕೆಟ್ ಪಂದ್ಯದಲ್ಲಿ ಅವರ ತಂಡವು ಆನ್‌ಲೈನ್ ಗೇಮಿಂಗ್ ಆ್ಯಪ್ನಲ್ಲಿ 1.5 ಕೋಟಿ ಬಹುಮಾನ ಗೆದ್ದಿತ್ತು. ಇದೀಗ ಪಿಎಸ್ಐ ಸೋಮನಾಥ್ ಝೆಂಡೆ ಅವರು ವಿವಾದದ ಸುಳಿಗೆ ಸಿಲುಕಿದ್ದಾರೆ. ಈ ಹಿಂದೆ, ಸೋಮನಾಥ್ ಝೆಂಡೆ ಅವರು ಚಕನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಡಿಸೆಂಬರ್ 2021ರಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಇಲಾಖೆಯಿಂದ ಪ್ರಕರಣ ಕೂಡಾ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅವರು ಅಮಾನತಾಗಿ, ಆ ಬಳಿಕ ಬೇರೆ ಕಡೆ ನೇಮಕಗೊಂಡಿದ್ದರು ಎಂದು ವರದಿಯಾಗಿದೆ.
ರಾಜ್ಯ ಪೊಲೀಸ್ ಪಡೆ ಬಗ್ಗೆ ತಪ್ಪು ಸಂದೇಶ- ಅಮೋಲ್ ಥೋರಟ್: ''ಆನ್‌ಲೈನ್ ಆಟಗಳಿಂದ ದೂರವಿರಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಗೃಹ ಸಚಿವ ದೇವೇಂದ್ರ ಫಡ್ನವೀಸ್‌ಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕ ಅಮೋಲ್ ಘೋರತ್ ತಿಳಿಸಿದ್ದಾರೆ. ''ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯದ ವೇಳೆ ಆನ್‌ಲೈನ್ ಗೇಮಿಂಗ್ನಲ್ಲಿ ತೊಡಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ವಿರುದ್ಧ ಕ್ರಮ ಕೈಗೊಳ್ಳಬೇಕು. ಪಿಎಸ್ಐ ಸೋಮನಾಥ್ ಝೆಂಡೆ ಖಾಕಿ ಸಮವಸ್ತ್ರದಲ್ಲಿರುವ ಫೋಟೋಗಳು ಮತ್ತು ವಿಡಿಯೋಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇದು ರಾಜ್ಯ ಪೊಲೀಸ್ ಪಡೆ ಬಗ್ಗೆ ತಪ್ಪು ಸಂದೇಶ ರವಾನೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೋಮನಾಥ್ ಝೆಂಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಮೋಲ್ ಥೋರಟ್ ಒತ್ತಾಯಿಸಿದ್ದಾರೆ.
ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಲಾಗುವುದು- ಸತೀಶ್ ಮಾನೆ: ''ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸೋಮನಾಥ್ ಝೆಂಡೆ ಕರ್ತವ್ಯ ಲೋಪವೆಸಗಿ, ಮೊಬೈಲ್ನಲ್ಲಿ ಆನ್‌ಲೈನ್ ಗೇಮಿಂಗ್ನಲ್ಲಿ ತೊಡಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆಡಳಿತಾತ್ಮಕ ಮತ್ತು ಕಾನೂನು ವಿಷಯಗಳ ಅಡಿ ಸಮಗ್ರ ತನಿಖೆ ನಡೆಸಿ ಸೋಮನಾಥ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಉಪ ಪೊಲೀಸ್ ಆಯುಕ್ತ ಗೋರೆ ಅವರು ಈ ಪ್ರಕರಣದ ವಿಚಾರಣೆ ನಡೆಸಲಿದ್ದಾರೆ'' ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಸತೀಶ್ ಮಾನೆ ತಿಳಿಸಿದ್ದಾರೆ.
ಇದನ್ನೂ ಓದಿ: ಗೇಮಿಂಗ್ ಆ್ಯಪ್ನಲ್ಲಿ 1.5 ಕೋಟಿ ರೂ. ಬಹುಮಾನ ಗೆದ್ದ ಪಿಎಸ್ಐ