ನಾಸಿಕ್( ಮಹಾರಾಷ್ಟ್ರ): ಜಿಲ್ಲೆಯ ಪಥರ್ಡಿ ಶಿವಾರ್ ಗ್ರಾಪಂ ವ್ಯಾಪ್ತಿಯ ವಾಡಿರಾನ್ ಪ್ರದೇಶದ ಡೆಮ್ಸೆ ಎಂಬ ರೈತನ ಕಬ್ಬಿನ ತೋಟದಲ್ಲಿ ಭಾನುವಾರ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದು ಮರಿಗಳನ್ನು ತಾಯಿ ಹೆಣ್ಣು ಚಿರತೆಯೊಂದಿಗೆ ಸೇರಿಸಲು ಅರಣ್ಯ ಇಲಾಖೆ ಕೈಗೊಂಡ ಕಾರ್ಯಾಚರಣೆ ಯಶಸ್ವಿಯಾಗಿದೆ.
ಮೂರು ಚಿರತೆ ಮರಿಗಳು ಪತ್ತೆಯಾಗಿದ್ದ ಎಂಟು ಗಂಟೆಯ ಬಳಿಕ ಹೆಣ್ಣು ಚಿರತೆ(ತಾಯಿ) ತನ್ನ ಮರಿಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದು ಫುಲ್ ವೈರಲ್ ಆಗಿದೆ.
ಮೂರು ಚಿರತೆ ಮರಿ ಪತ್ತೆ : ಡೆಮ್ಸೆ ಅವರ ತೋಟದಲ್ಲಿ ಭಾನುವಾರ ಮಧ್ಯಾಹ್ನ ಕಾರ್ಮಿಕರು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮೊದಲು ಒಂದು ಚಿರತೆ ಮರಿ ಪತ್ತೆಯಾಗಿದೆ. ಸ್ವಲ್ಪ ಸಮಯದ ನಂತರ ಅದೇ ಸ್ಥಳದಲ್ಲಿ ಮತ್ತೆ ಎರಡು ಚಿರತೆ ಮರಿಗಳು ಕಾಣಿಸಿಕೊಂಡಿವೆ. ನೋಡಿ ಭಯಪಟ್ಟ ಕಾರ್ಮಿಕರು ಕಬ್ಬು ಕಡಿಯುವುದನ್ನು ನಿಲ್ಲಿಸಿ್ದ್ದಾರೆ.
ತಕ್ಷಣ ಚಿರತೆ ಮರಿಗಳು ಪತ್ತೆಯಾಗಿರುವ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಧಾವಿಸಿದೆ. ಅರಣ್ಯ ಸಿಬ್ಬಂದಿ ಮೂರು ಚಿರತೆ ಮರಿಗಳನ್ನು ವಶಕ್ಕೆ ಪಡೆದು ಮೊದಲು ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಒಂದು ತಿಂಗಳಿನ ಮೂರು ಚಿರತೆ ಮರಿಗಳು ಗಂಡಾಗಿದ್ದುಆರೋಗ್ಯವಾಗಿದ್ದವು .
ಆರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ: ಅರಣ್ಯ ಇಲಾಖೆ ಸಿಬ್ಬಂದಿ ಮೂರು ಮರಿಗಳನ್ನು ಬಿದರಿನ ಬುಟ್ಟಿಯಲ್ಲಿ ಹಾಕಿ ನೈಸರ್ಗಿಕ ವಾಸಸ್ಥಳವಾಗಿರುವ ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದಾರೆ. ಮರಿಗಳ ತಾಯಿ ಹೆಣ್ಣು ಚಿರತೆ ಚಲನವಲನ ಸೆರೆಹಿಡಿಯಲು ಸುತ್ತುವರಿದು ಮೂರು ಟ್ರ್ಯಾಪ್ ಕ್ಯಾಮೆರಾ ಮತ್ತು 360 ಸುತ್ತುವ ಆನ್‌ಲೈನ್ ಕ್ಯಾಮೆರಾ ಅಳವಡಿಸಿದ್ದಾರೆ.
ತಾಯಿ ಒಡಲು ಸೇರಿದ ಮರಿಗಳು: ಅರಣ್ಯಾಧಿಕಾರಿ ವಿವೇಕ್ ಭಡಾನೆ, ಫಾರೆಸ್ಟರ್ ಅನಿಲ್ ಅಹಿರಾರಾವ್ ಅವರು, ಹೆಣ್ಣು ಚಿರತ ತನ್ನ ಮರಿಗಳಿಗಾಗಿ ಕಬ್ಬಿನ ತೋಟಕ್ಕೆ ಬರುವುದೂ ನಿಶ್ಚಿತ, ಗ್ರಾಮಸ್ಥರು ಯಾರೂ ಇತ್ತ ಸುಳಿಯದಂತೆ ಎಚ್ಚರಿಕೆ ರವಾನಿಸಿದ್ದಾರೆ. ಕೊನೆಗೆ ಭಾನುವಾರ ರಾತ್ರಿ ಎಂಟು ಗಂಟೆ ಕಾದ ಬಳಿಕ ಹೆಣ್ಣು ಚಿರತೆ ತನ್ನ ಮೂರು ಮರಿಗಳನ್ನು ಕರೆದುಕೊಂಡು ಹೋಗಿದೆ. ಚಿರತೆ ಮರಿಗಳು ಹಾಗೂ ತಾಯಿಯೊಂದಿಗೆ ಸೇರುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಇತ್ತ ನಿಟ್ಟುಸಿರು ಬಿಟ್ಟಿದೆ.
ಇದನ್ನೂಓದಿ:ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಗಡಿ ಗಲಾಟೆ: ಕರ್ನಾಟಕ-ಮಹಾರಾಷ್ಟ್ರ ಸಂಸದರ ನಡುವೆ ಗದ್ದಲ