ಪಾಲ್ಘರ್(ಮಹಾರಾಷ್ಟ್ರ): ಜಿಲ್ಲೆಯ ದಹಾನು ಪ್ರದೇಶದಲ್ಲಿ ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಐಷಾರಾಮಿ ಬಸ್‌ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃಪಟ್ಟಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.ಈ ದುರ್ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತ ನಾಲ್ವರೂ ಮುಂಬೈನಿಂದ ಸೂರತ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಬಸ್‌ಗೆ ಡಿಕ್ಕಿ ಹೊಡೆದಿದೆ ಎಂದು ಪಾಲ್ಘರ್ ಪೊಲೀಸರು ಮಾಹಿತಿ ನೀಡಿದ್ದಾರೆ. ಮೊಹಮ್ಮದ್ ಹಫೀಜ್ (36), ಇಬ್ರಾಹಿಂ ದಾವೂದ್ (60), ಆಶಿಯಾ ಕಲೆಕ್ಟರ್ (57) ಮತ್ತು ಇಸ್ಮಾಯಿಲ್ ದೇಸಾಯಿ (42) ಎಂದು ಮೃತರನ್ನು ಗುರುತಿಸಲಾಗಿದೆ. ಮೃತರು ಸೂರತ್‌ನ ಬಾರ್ಡೋಲಿ ನಿವಾಸಿಗಳು ಎಂದು ಪಾಲ್ಘರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್ ತಿಳಿಸಿದ್ದಾರೆ.
''ದಹಣುವಿನ ಕಳಸ ಸೇತುವೆ ಬಳಿ ಮುಂಜಾನೆ 3.10ಕ್ಕೆ ಅಪಘಾತ ಸಂಭವಿಸಿದೆ. ಈ ನಾಲ್ವರು ಇದ್ದ ಕಾರು ಗುಜರಾತಿಗೆ ಹೊರಟಿತ್ತು. ಕಾರ್ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಮುಂಬೈ- ಅಹಮದಾಬಾದ್ ಹೆದ್ದಾರಿಯಲ್ಲಿ ಬಂದು ಐಷಾರಾಮಿ ಬಸ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ'' ಎಂದು ಪಾಟೀಲ್ ಹೇಳಿದರು. ಅಪಘಾತದ ಪರಿಣಾಮವು ಎಷ್ಟು ತೀವ್ರವಾಗಿದೆಯೆಂದರೆ, ಎಲ್ಲಾ ನಾಲ್ಕು ದೇಹಗಳು ಕಾರಿನಲ್ಲಿ ಸಿಲುಕಿಕೊಂಡಿದ್ದು, ನುಜ್ಜುಗುಜ್ಜಾಗಿವೆ ಹಾಗೂ ಐಷಾರಾಮಿ ಬಸ್ಸಿನ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳು ಕಳಸದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಪಾಟೀಲ್ ತಿಳಿಸಿದ್ದಾರೆ. ಈ ಕುರಿತು ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ.
ಇತ್ತೀಚೆಗೆ ನಡೆದಿದ್ದ ಕಾರ್ ಅಪಘಾತ: ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ಕು ಜನರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ತಿರುಪತಿ ಚಂದ್ರಗಿರಿ ಮಂಡಲದ ಕಲ್ರೋಡ್ಪಲ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿತ್ತು. ಅನಂತ ತೆಂಬುಕರ್, ಮಯೂರ್ ಮಟನ್, ಋಷಿಕೇಶ ಜಂಗಮ, ಅಜಯ್ ನಂಗನಾಡ್ ಲುಟ್ಟೆ ಮೃತಪಟ್ಟಿದ್ದರು. ಒಟ್ಟು ಒಂಬತ್ತು ಜನ ಕಾರಿನಲ್ಲಿ ಪ್ರಾಯಣಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಜರುಗಿತ್ತು.
ಘಟನೆಯಲ್ಲಿ ಇನ್ನೂ 5 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಿರುಪತಿಯ ರುಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ 9 ಜನರು ಸ್ನೇಹಿತರಾಗಿದ್ದು, ಮಹಾರಾಷ್ಟ್ರದ ಸೋಲಾಪುರದವರೆಂದು ತಿಳಿದು ಬಂದಿತ್ತು. ಇವರು ತಿರುಮಲದಲ್ಲಿ ದೇವರ ದರ್ಶನ ಪಡೆದು ಕಾಣಿಪಾಕಂಗೆ ಹೋಗುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.
ಜ.19ಕ್ಕೆ ನಡೆದಿತ್ತು ಭೀಕರ ರಸ್ತೆ ಅಪಘಾತ: ಗೋವಾ- ಮುಂಬೈ ಹೆದ್ದಾರಿಯಲ್ಲಿ ಜ.19ರಂದು ವ್ಯಾನ್ ಮತ್ತು ಟ್ರಕ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ 9 ಜನರು ಮೃತಪಟ್ಟಿದ್ದರು. ಮೃತರಲ್ಲಿ 5 ಜನ ಪುರುಷರು ಮತ್ತು ಮೂವರು ಮಹಿಳೆಯರು ಹಾಗೂ ಒಂದು ಮಗು ಸೇರಿತ್ತು. ಒಂದು ಮಗು ಗಾಯಗೊಂಡಿತ್ತು. ರಾಯಗಡ ಜಿಲ್ಲೆ ರೆಪೊಲಿ ಎಂಬಲ್ಲಿ ದುರಂತ ನಡೆದಿತ್ತು.
ಇದನ್ನೂ ಓದಿ: ಉತ್ತರಾಖಂಡ, ಲಡಾಕ್‌ನಲ್ಲಿ ಭಾರಿ ಹಿಮಪಾತ; ಇಬ್ಬರು ಬಲಿ