ಥಾಣೆ (ಮಹಾರಾಷ್ಟ್ರ): ಉಲ್ಹಾಸ್ ನಗರದ ಶಾಹದ್ ಪ್ರದೇಶದಲ್ಲಿ ಸೆಂಚುರಿ ಕಂಪನಿಯಲ್ಲಿ ಇಂದು (ಶನಿವಾರ) ಭಾರಿ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ (Blast at Century Company) ಹಲವು ಕಾರ್ಮಿಕರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಗಾಯಗೊಂಡ ಕಾರ್ಮಿಕರನ್ನು ಸೆಂಚುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಸೆಂಚುರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ: ಈ ಸ್ಫೋಟ ಸಂಭವಿಸಿದ ವೇಳೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಹಲವು ಕಾರ್ಮಿಕರು ಗಾಯಗೊಂಡಿದ್ದಾರೆ. ಇವರೆಲ್ಲರನ್ನು ಚಿಕಿತ್ಸೆಗಾಗಿ ಸೆಂಚುರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ಈ ಕಂಪನಿಯೊಳಗೆ ಇನ್ನೂ ಹಲವು ಕಾರ್ಮಿಕರು ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಹೆಚ್ಚಿದೆ.
ಸ್ಫೋಟದ ಭೀಕರತೆಗೆ ನಡುಗಿದ ಮನೆಗಳು: ಸ್ಫೋಟದ ಭೀಕರತೆಯಿಂದ ತಾನಾಜಿನಗರ, ಶಹದ್ ಗವ್ಥಾನ್, ಗುಲ್ಶನ್ ನಗರ, ಶಹಾದ್ ಫಟಕ್, ಧೋಬಿಘಾಟ್, ಶಿವನೇರಿ ನಗರ ಪ್ರದೇಶಗಳಲ್ಲಿನ ಮನೆಗಳು ನಡುಗಿದವು. ಇದಾದ ನಂತರ, ಕಂಪನಿಯಲ್ಲಿ ಸ್ಫೋಟಗೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯ ನಡೆಯುತ್ತಿದೆ.
ಉಲ್ಹಾಸ್ ನಗರದ ಸೆಂಚುರಿ ಕಂಪನಿ. ಈ ಕಂಪನಿಯಲ್ಲಿ ಶನಿವಾರ ಏಕಾಏಕಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಕಂಪನಿಯ ಇತರ ಭಾಗಗಳಿಗೂ ಬೆಂಕಿ ಆವರಿಸಿದೆ. ಇದರಿಂದಾಗಿ ಕಂಪನಿಯ ಕೆಲಸಗಾರರಲ್ಲಿ ನೂಕುನುಗ್ಗಲು ಉಂಟಾಯಿತು. ಈ ಸ್ಫೋಟದಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡವರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ. ಸ್ಫೋಟದ ಸದ್ದಿಗೆ ಸುತ್ತಮುತ್ತಲಿನ ಜನರೂ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇತ್ತೀಚಿನ ಘಟನೆ, ಕೇರಳದ ಕಾರ್ಖಾನೆಯಲ್ಲಿ ಸ್ಫೋಟ: ಕೇರಳ ರಾಜ್ಯದ ಎರ್ನಾಕುಲಂನ ನಿಟ್ಟಾ ಜಿಲಟಿನ್ ಇಂಡಿಯಾ ಲಿಮಿಟೆಡ್ ಕಾರ್ಖಾನೆಯಲ್ಲಿ ಸೆ.19 ರಂದು ಸ್ಫೋಟ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ನಾಲ್ವರು ಗಾಯಗೊಂಡಿದ್ದರು. ಮೃತನನ್ನು ಪಂಜಾಬ್ ರಾಜ್ಯದ ನಿವಾಸಿ ರಾಜನ್ ಒರಂಗ್ (30) ಎಂದು ಗುರುತಿಸಲಾಗಿತ್ತು.
ಎರ್ನಾಕುಲಂನ ಕಕ್ಕನಾಡ್‌ನಲ್ಲಿರುವ ಕಾರ್ಖಾನೆಯಲ್ಲಿ ಸೆ.19 ರಂದು 8 ಗಂಟೆಯ ಸುಮಾರಿಗೆ ಘಟನೆ ನಡೆದಿತ್ತು. ರಾಸಾಯನಿಕ ಪದಾರ್ಥಗಳನ್ನು ಸಂಗ್ರಹಿಸಿ ಇಟ್ಟಿದ್ದ ಪ್ರದೇಶದಲ್ಲಿ ಸ್ಫೋಟ ಸಂಭವಿಸಿತ್ತು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದರು.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸ್ಫೋಟ, ಸಾವು ಪ್ರಕರಣಗಳು: ಎನ್ಎಸ್ಜಿ ಮಾಜಿ ಅಧಿಕಾರಿ ಮಾಹಿತಿ