ಕೇರಳ: ‘ಮೆಟ್ರೋ ಮ್ಯಾನ್’ ಎಂದೇ ಖ್ಯಾತರಾಗಿರುವ 90 ವರ್ಷದ ಇ.ಶ್ರೀಧರನ್ ಸಕ್ರಿಯ ರಾಜಕಾರಣದಿಂದ ದೂರ ಉಳಿಯಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ತೊಡಗುವುದಿಲ್ಲ.
ರಾಜಕೀಯದಿಂದ ದೂರ ಉಳಿದು ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನಗೆ 90 ವರ್ಷ ವಯಸ್ಸಾಗಿದ್ದು, ಇನ್ನು ಮುಂದೆ ಸಕ್ರಿಯ ರಾಜಕಾರಣದಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದರು.
ನಾನು ಅಧಿಕಾರಶಾಹಿಯಾಗಿ ರಾಜಕೀಯಕ್ಕೆ ಸೇರಿದ್ದೆ. ರಾಜಕೀಯ ಹೊರತು ಪಡಿಸಿ ಮೂರು ಟ್ರಸ್ಟ್‌ಗಳ ಮೂಲಕ ಜನರ ಸೇವೆ ಮಾಡುತ್ತಿದ್ದೇನೆ. ವಿಧಾನಸಭೆ ಚುನಾವಣಾ ಸೋಲಿನ ನಂತರ ಸ್ವಲ್ಪ ನಿರಾಶೆಗೊಂಡಿರುವುದ ನಿಜ. ಆದರೆ, ಈಗ ಅಲ್ಲ. ಅಧಿಕಾರ ಸಿಗದೇ ಕೇವಲ ಶಾಸಕರಿಂದ ಏನೂ ಮಾಡಲು ಸಾಧ್ಯವಿಲ್ಲ.
ಕೇರಳದ ಬಿಜೆಪಿಗೆ ಹಲವು ವಿಷಯಗಳಲ್ಲಿ ತಿದ್ದುಪಡಿಗಳ ಅಗತ್ಯವಿದೆ. ಕೆಲ ನೀತಿಗಳನ್ನು ಬದಲಾಯಿಸಿದರೆ ಕೇರಳದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತದೆ ಎಂದರು.
ಈ ವರ್ಷ ಏಪ್ರಿಲ್‌ನಲ್ಲಿ ನಡೆದ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಶ್ರೀಧರನ್ ಅವರು ಕೇರಳದ ಪಾಲಕ್ಕಾಡ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಆದರೆ, ಬಿಜೆಪಿ ಚುನಾವಣೆಯಲ್ಲಿ ಸೋಲು ಕಂಡಿತು.