ವಾಪಿ(ಗುಜರಾತ್): ಇಲ್ಲಿನ ವ್ಯಾಪಿ ಜಿಐಡಿಸಿ ಪ್ರದೇಶದಲ್ಲಿ ಅಕ್ರಮವಾಗಿ ಮೆಫೆಡ್ರೋನ್ ಡ್ರಗ್ಸ್ ಉತ್ಪಾದನೆಯಲ್ಲಿ ತೊಡಗಿದ್ದ ಪ್ರೈಮ್ ಪಾಲಿಮರ್ ಇಂಡಸ್ಟ್ರೀಸ್ ಹೆಸರಿನ ಕಾರ್ಖಾನೆ ಮೇಲೆ ಡಿಆರ್‌ಐ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿದ್ದು, ಕೋಟ್ಯಂತರ ಮೌಲ್ಯದ ಒಟ್ಟು 121.75 ಕೆ.ಜಿ ಮೆಫೆಡ್ರೋನ್ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯ ಸಂಪೂರ್ಣ ವಿವರ: ಕಾರ್ಖಾನೆಯಲ್ಲಿ ಅಕ್ರಮವಾಗಿ ಮೆಫೆಡ್ರೋನ್ ಉತ್ಪಾದನೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದು ಡಿಐಆರ್ ತಂಡ ಕಾರ್ಯಾಚರಣೆ ಕೈಗೊಂಡಿತ್ತು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದೆ. ವಶಪಡಿಸಿಕೊಂಡ ಡ್ರಗ್ಸ್ ಬೆಲೆ ಅಂದಾಜು 180 ಕೋಟಿ ರೂ.ಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಸೂರತ್ ಮತ್ತು ವಲ್ಸಾದ್‌ನ ಫೊರೆನ್ಸಿಕ್ ಸೈನ್ಸ್ ಲ್ಯಾಬ್‌ನ ತಂಡ ಕಾರ್ಖಾನೆಯಲ್ಲಿ ಪತ್ತೆಯಾದ ಮಾದಕವಸ್ತುಗಳಲ್ಲಿ ಮೆಫೆಡ್ರೋನ್ ಇರುವಿಕೆಯನ್ನು ಖಚಿತಪಡಿಸಿದೆ. ಬಂಧಿತ ಆರೋಪಿಯೋರ್ವನಿಂದ 18 ಲಕ್ಷ ರೂ ನಗದು ಜಪ್ತಿ ಮಾಡಲಾಗಿದೆ.
ಎರಡು ವಾರಗಳ ಹಿಂದೆ, ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿನ ರಾಸಾಯನಿಕ ಘಟಕದಲ್ಲಿ ಮೆಫೆಡ್ರೋನ್ ಉತ್ಪಾದನೆಯಲ್ಲಿ ತೊಡಗಿದ್ದ ಜಾಲವನ್ನು ಡಿಆಆರ್ ಅಧಿಕಾರಿಗಳು ಕಂಡು ಹಿಡಿದಿದ್ದರು. ಕಾರ್ಯಾಚರಣೆಯಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಮೆಫೆಡ್ರೋನ್‌ನ ರಹಸ್ಯ ತಯಾರಿಕೆಯಲ್ಲಿ ತೊಡಗಿದ್ದ ಎರಡು ಪ್ರಯೋಗಾಲಯಗಳನ್ನೂ ಪತ್ತೆ ಮಾಡಲಾಗಿತ್ತು.