ಮುಂಬೈ: ವಿದೇಶಕ್ಕೆ ಪರಾರಿಯಾಗಿ ಪ್ರಸ್ತುತ ಡೊಮಿನಿಕಾ ದೇಶದ ಜೈಲಿನಲ್ಲಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಸುಳ್ಳು ದಾಖಲೆಗಳನ್ನು ನೀಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ 6,344.96 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಕೇಂದ್ರ ತನಿಖಾ ದಳ (CBI) ತಿಳಿಸಿದೆ. ಚೋಕ್ಸಿ ವಂಚನೆ ಪ್ರಕರಣದ ಮೂರು ವರ್ಷಗಳ ಸುದೀರ್ಘ ತನಿಖೆಯ ಬಳಿಕ ಸಿಬಿಐ ತನ್ನ ಪೂರಕ ಚಾರ್ಜ್‌ಶೀಟ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದೆ.
ಕಳೆದ ವಾರ ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಬಿಐ ಈ ಬಗ್ಗೆ ವಿವರವಾಗಿ ತಿಳಿಸಿದೆ. ಪಿಎನ್ಬಿಯ ಉದ್ಯೋಗಿಗಳೇ ಚೋಕ್ಸಿ ಮತ್ತು ಆತನ ಕಂಪನಿ ಜೊತೆಗೂಡಿ ವಂಚನೆಗೆ ಸಹಕಾರ ಮಾಡಿಕೊಟ್ಟಿದ್ದಾರೆ ಎಂಬ ಆಘಾತಕಾರಿ ಸಂಗತಿಯೂ ಬೆಳಕಿಗೆ ಬಂದಿದೆ.
ಮುಂಬೈನ ಬ್ರಾಡಿ ಹೌಸ್ ಪಿಎನ್‌ಬಿ ಶಾಖೆಯ ಅಧಿಕಾರಿಗಳು ಮಾರ್ಚ್-ಏಪ್ರಿಲ್ 2017 ರ ಅವಧಿಯಲ್ಲಿ 165 ಜವಾಬ್ದಾರಿ ಪತ್ರ (Letter of Undertaking) ಮತ್ತು 58 ವಿದೇಶಿ ಸಾಲ ಪತ್ರ (FLC) ಬಿಡುಗಡೆ ಮಾಡಿದ್ದು, ಇದರ ವಿರುದ್ಧ 311 ಬಿಲ್‌ಗಳನ್ನು ರಿಯಾಯಿತಿಯಾಗಿ ನೀಡಿದ್ದಾರೆ.
ಈ ಎಲ್‌ಒಯು ಮತ್ತು ಎಫ್ಎಲ್ಸಿಗಳನ್ನು ಯಾವುದೇ ಅನುಮೋದಿತ ಮಿತಿ ಅಥವಾ ನಗದು ಮಿತಿ ಇಲ್ಲದೆ ಮತ್ತು ಭದ್ರತೆ ಸಮಸ್ಯೆಯನ್ನು ತಪ್ಪಿಸಲು ಕೇಂದ್ರ ಬ್ಯಾಂಕ್ನಲ್ಲಿ ನಮೂದು ಮಾಡದೆಯೇ ಚೋಕ್ಸಿಯ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಜವಾಬ್ದಾರಿ ಪತ್ರ ವಿದೇಶಿ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಓರ್ವ ವ್ಯಕ್ತಿಯ ಪರವಾಗಿ ದೇಶಿಯ ಬ್ಯಾಂಕ್ ನೀಡುವ ಪತ್ರವಾಗಿದೆ. ವಿದೇಶಿ ಬ್ಯಾಂಕ್ಗಳಲ್ಲಿ ಸಾಲ ಪಡೆದ ವ್ಯಕ್ತಿ ಮರುಪಾವತಿಸದಿದ್ದರೆ, ಅದರ ಮರುಪಾವತಿ ಜವಾಬ್ದಾರಿ ಎಲ್‌ಒಯು ನೀಡಿದ ಬ್ಯಾಂಕ್ ವಹಿಸಿಕೊಳ್ಳಬೇಕಾಗುತ್ತದೆ.
ಪಿಎನ್‌ಬಿ ಚೋಕ್ಸಿಗೆ ನೀಡಿದ ಎಲ್ಒ ಆಧಾರದ ಮೇಲೆ ಎಸ್‌ಬಿಐ-ಮಾರಿಷಸ್, ಅಲಹಾಬಾದ್ ಬ್ಯಾಂಕ್-ಹಾಂಗ್ ಕಾಂಗ್, ಆಕ್ಸಿಸ್ ಬ್ಯಾಂಕ್-ಹಾಂಗ್ ಕಾಂಗ್, ಬ್ಯಾಂಕ್ ಆಫ್ ಇಂಡಿಯಾ-ಆಂಟ್ವೆರ್ಪ್, ಕೆನರಾ ಬ್ಯಾಂಕ್-ಮಾಮಾನಾ ಮತ್ತು ಎಸ್‌ಬಿಐ-ಫ್ರಾಂಕ್‌ಫರ್ಟ್ ಸಾಲ ನೀಡಿವೆ.
ಚೋಕ್ಸಿಯ ಕಂಪನಿಗಳು ಪಡೆದ ಸಾಲವನ್ನು ಮರುಪಾವತಿಸದ ಕಾರಣ ಎಲ್‌ಒಯು ನೀಡಿದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಡ್ಡಿ ಸೇರಿದಂತೆ 6,344.97 ಕೋಟಿ ( 965.18 ಯುಎಸ್ ಡಾಲರ್) ಹಣವನ್ನು ಸಾಗರೋತ್ತರ ಬ್ಯಾಂಕ್ಗಳಿಗೆ ಪಾವತಿಸಿದೆ ಎಂದು ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಮೆಹುಲ್ ಚೋಕ್ಸಿಗೆ ಮಾನಸಿಕ ಒತ್ತಡ, ರಕ್ತದೊತ್ತಡ: ಕೋರ್ಟ್ಗೆ ಗೈರು