ಪೂಂಚ್(ಜಮ್ಮು- ಕಾಶ್ಮೀರ): ಜಮ್ಮು ಕಾಶ್ಮೀರಕ್ಕೆ ರಾಜ್ಯ ಮತ್ತು ವಿಶೇಷ ಸ್ಥಾನಮಾನವನ್ನು ಮರಳಿ ನೀಡಬೇಕು ಎಂದು ಹೋರಾಟ ನಡೆಸುತ್ತಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಪೂಂಚ್ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ನವಗ್ರಹ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆಗೆ 2 ದಿನಗಳ ಭೇಟಿ ನೀಡಿರುವ ಮುಫ್ತಿ, ನವಗ್ರಹ ದೇವಸ್ಥಾನಕ್ಕೆ ಬಂದರು. ಇಡೀ ದೇವಾಲಯವನ್ನು ಪ್ರದಕ್ಷಿಣೆ ಹಾಕಿದ್ದಲ್ಲದೆ, ಶಿವಲಿಂಗಕ್ಕೆ ಜಲಾಭಿಷೇಕವನ್ನೂ ನೆರವೇರಿಸಿದರು. ಆ ಬಳಿಕ ದೇವಾಲಯದ ಆವರಣದಲ್ಲಿರುವ ಬಾನಿ ಯಶಪಾಲ್ ಶರ್ಮಾ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಇದು ರಾಜಕೀಯ ಗಿಮಿಕ್-ಬಿಜೆಪಿ: ಮೆಹಬೂಬಾ ಮುಫ್ತಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿರುವುದನ್ನು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಇದೊಂದು ರಾಜಕೀಯ ಗಿಮಿಕ್. ಸಾಫ್ಟ್ ಹಿಂದುತ್ವದ ಮೂಲಕ ಜನರನ್ನು ಓಲೈಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಿಜೆಪಿ ವಕ್ತಾರ ರಣಬೀರ್ ಸಿಂಗ್ ಪಠಾನಿಯಾ ಮಾತನಾಡಿ, "2008 ರಲ್ಲಿ ಮೆಹಬೂಬಾ ಮುಫ್ತಿ ಮತ್ತು ಅವರ ಪಕ್ಷವು ಇಲ್ಲಿನ ಅಮರನಾಥ ದೇಗುಲ ಮಂಡಳಿಗೆ ಭೂಮಿ ಹಂಚಿಕೆ ಮಾಡುವುದನ್ನು ಬಲವಾಗಿ ವಿರೋಧಿಸಿತ್ತು. ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಕೊಠಡಿಗಳನ್ನು ನಿರ್ಮಾಣಕ್ಕಾಗಿ ಭೂಮಿ ಹಂಚಿಕೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಅದನ್ನೇ ಮುಫ್ತಿ ಅಂದು ವಿರೋಧಿಸಿದ್ದರು. ಇಂದು ನವಗ್ರಹ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಕೇವಲ ರಾಜಕೀಯ ಗಿಮಿಕ್ ಆಗಿದೆ. ಅದು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ. ರಾಜಕೀಯ ಗಿಮಿಕ್‌ಗಳು ಬದಲಾವಣೆಗಳನ್ನು ತರುವುದಾದಲ್ಲಿ ಜಮ್ಮು ಮತ್ತು ಕಾಶ್ಮೀರ ಸಮೃದ್ಧಿಯ ತೋಟವಾಗಿರುತ್ತಿತ್ತು" ಎಂದು ಹೇಳಿದರು.
ಭಜನೆಗೆ ವಿರೋಧಿಸಿದ್ದ ಮುಫ್ತಿ: ಜಮ್ಮು ಕಾಶ್ಮೀರ ಆಡಳಿತ ಶಾಲೆಗಳಲ್ಲಿ ಗಾಂಧಿ ಜಯಂತಿಯಂದು ಸರ್ವ ನಂಬಿಕೆಯ ಪ್ರಾರ್ಥನೆಯಾದ ರಘುಪತಿ ರಾಘವ ರಾಜಾ ರಾಮ್, ಈಶ್ವರ್ ಅಲ್ಲಾ ತೇರೋ ನಾಮ್ ಅನ್ನು ಪಠಿಸಲು ಸಲಹೆ ನೀಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಮೆಹಬೂಬಾ ಮುಫ್ತಿ, ಮುಸ್ಲಿಂ ಮಕ್ಕಳನ್ನು ಶಾಲೆಗಳಲ್ಲಿ ಭಜನೆ ಹಾಡುವಂತೆ ಒತ್ತಾಯಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ತನ್ನ ಹಿಂದುತ್ವದ ಅಜೆಂಡಾವನ್ನು ಸಾಧಿಸಲು ಮುಂದಾಗುತ್ತಿದೆ ಎಂದು ಆರೋಪಿಸಿದ್ದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 153ನೇ ಜನ್ಮದಿನದ ಅಂಗವಾಗಿ ನಡೆದ ಸರಣಿಯ ಚಟುವಟಿಕೆಗಳ ಭಾಗವಾಗಿ ಜಮ್ಮು ಕಾಶ್ಮೀರದ ಶಾಲೆಗಳಲ್ಲಿ "ರಘುಪತಿ ರಾಘವ" ಪಠಣವನ್ನು ಮಾಡಲಾಯಿತು. ಇದು ಗಾಂಧೀಜಿಯವರ ಅಚ್ಚುಮೆಚ್ಚಿನ ಭಜನೆಗಳಲ್ಲಿ ಒಂದಾಗಿದ್ದರಿಂದ ಆಚರಣೆಯ ಭಾಗವಾಗಿತ್ತು ಎಂದು ತಿಳಿದುಬಂದಿದೆ.
ಕುಲ್ಗಾಮ್ ಶಾಲೆಯಲ್ಲಿ ವಿದ್ಯಾರ್ಥಿಗಳು ರಘುಪತಿ ರಾಘವ ರಾಜಾ ರಾಮ್ ಹಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದ ಮೆಹಬೂಬಾ ಮುಫ್ತಿ, "ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಾಮಾ ಮಸೀದಿಯನ್ನು ಮುಚ್ಚುವುದು ಮತ್ತು ಇಲ್ಲಿನ ಶಾಲಾ ಮಕ್ಕಳಿಗೆ ಹಿಂದೂ ಗೀತೆಗಳನ್ನು ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರದ ನಿಜವಾದ ಹಿಂದುತ್ವದ ಅಜೆಂಡಾವನ್ನು ಬಹಿರಂಗಪಡಿಸುತ್ತದೆ" ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದರು.
"ಮುಸ್ಲಿಂ ಮಕ್ಕಳನ್ನು ಶಾಲೆಯಲ್ಲಿ ಭಜನೆ ಹಾಡಲು ಬಲವಂತಪಡಿಸಲಾಗುತ್ತಿದೆ. ಬಿಜೆಪಿಯು ತನ್ನ ಹಿಂದುತ್ವದ ಅಜೆಂಡಾವನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪರೀಕ್ಷಿಸಲು ಬಯಸುತ್ತದೆ" ಎಂದು ಹೇಳಿದ್ದರು. ಇದನ್ನು ಬಿಜೆಪಿ ಟೀಕಿಸಿತ್ತು. ಇದೊಂದು ಕಾರಣವಿಲ್ಲದ ದೂರಾಗಿದೆ. ಗಾಂಧಿ ಜಯಂತಿಯಂದು ಭಜನೆ ಮಾಡಲು ಸಲಹೆ ನೀಡಿದ್ದು, ಹಿಂದು ಅಜೆಂಡಾ ಸಾಧಿಸಲು ಅಲ್ಲ ಎಂದಿತ್ತು. ಇನ್ನೊಬ್ಬ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರೂ ಕೂಡ ಮುಫ್ತಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಜನೆಗಳನ್ನು ಹಾಡುವ ಮೂಲಕ ಅಥವಾ ಮುಸ್ಲಿಂ ಅಥವಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಯಾರೂ ತಮ್ಮ ನಂಬಿಕೆಯನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು.
ಇದನ್ನೂ ಓದಿ: ಕೊಲೆ ಬೆದರಿಕೆ ಆರೋಪ: ಪೊಲೀಸರಿಗೆ ದೂರು ನೀಡಿದ ನಟಿ ಸಂಜನಾ ಗಲ್ರಾನಿ