ವೆಸ್ಟ್ ಗಾರೋ ಹಿಲ್ಸ್(ಮೇಘಾಲಯ): ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮೇಘಾಲಯದ ವೆಸ್ಟ್ ಗಾರೋ ಹಿಲ್ಸ್ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 3.25 ಕೆಜಿ ಸ್ಫೋಟಕಗಳನ್ನು ಶುಕ್ರವಾರ ವಶಕ್ಕೆ ಪಡೆದಿದೆ.
ಟಿಕ್ರಿಕಿಲ್ಲಾದಲ್ಲಿ ಸಿಆರ್ಪಿಎಫ್ನ 120ನೇ ಬೆಟಾಲಿಯನ್ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳನ್ನು (IED), 13 ಜಿಲೆಟಿನ್ ಸ್ಟಿಕ್ ಮತ್ತು ಮೂರು ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ವಶಕ್ಕೆ ಪಡೆಯಲಾದ ಎರಡು ಐಇಡಿಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಸಿಆರ್‌ಪಿಎಫ್ ಮಾಹಿತಿ ನೀಡಿದೆ.
ವೆಸ್ಟ್ ಗಾರೋ ಹಿಲ್ಸ್ನ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಂಬಲರ್ಹವಾದ ಮೂಲ ಮಾಹಿತಿಯ ಆಧಾರದ ಮೇಲೆ, ವೆಸ್ಟ್ ಗರೋ ಹಿಲ್ಸ್ ಪೊಲೀಸ್ ಮತ್ತು ಸಿಆರ್ಪಿಎಫ್ನ 120ನೇ ಬೆಟಾಲಿಯನ್ ಜಂಟಿ ಕಾರ್ಯಾಚರಣೆ ನಡೆಸಿತ್ತು. ಟಿಕ್ರಿಕಿಲ್ಲಾದ ಮೆಂಗೊಟ್ಚಿಗ್ರೆ ಗ್ರಾಮದಲ್ಲಿ ದಾಳಿ ನಡೆಸಿ, ಸ್ಫೋಟಕಗಳನ್ನು ಜಪ್ತಿ ಮಾಡಲಾಗಿದೆ ಎಂದಿದ್ದಾರೆ.
ಈ ಘಟನೆಗೆ ಸಂಭವಿಸಿದಂತೆ ಸ್ಫೋಟಕ ವಸ್ತುಗಳ ಕಾಯ್ದೆ-1908ರ ಸೆಕ್ಷನ್ 5ರ ಅಡಿಯಲ್ಲಿ ಟಿಕ್ರಿಕಿಲ್ಲಾ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದರೆ, ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಮಾಹಿತಿ ನೀಡಿದವರ ಗುರುತನ್ನು ರಹಸ್ಯವಾಗಿಡಲಾಗುತ್ತದೆ ಮತ್ತು ಸೂಕ್ತ ಬಹುಮಾನವನ್ನು ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಹೊಸದಾಗಿ 33,376 COVID ಪ್ರಕರಣಗಳು ಪತ್ತೆ.. 308 ಸಾವು