ಶ್ರೀನಗರ, ಜಮ್ಮು ಕಾಶ್ಮೀರ: ಕಣಿವೆನಾಡು ಕಾಶ್ಮೀರ ಪ್ರವಾಸಿಗರ ಸ್ವರ್ಗ. ಅಲ್ಲಿರುವ ಪರ್ವತಗಳು, ಸರೋವರಗಳು ಕಣ್ಣಿಗೆ ಹಬ್ಬವನ್ನು ತಂದುಕೊಡುತ್ತವೆ. ಆದ್ದರಿಂದಲೇ ಪ್ರವಾಸಿಗರಿಗೆ ಮಾತ್ರವಲ್ಲದೇ, ಪ್ರವಾಸಿಗರಿಗೂ ಅದು ಹೇಳಿ ಮಾಡಿಸಿರುವ ತಾಣವಾಗಿದೆ.
ಈ ತಾಣಕ್ಕೆ ಬೆಂಗಳೂರಿನ ನಿವಾಸಿಯಾದ, ಟ್ರೆಕ್ಕಿಂಗ್ ಉತ್ಸಾಹಿಯಾದ ನಮ್ರತಾ ನಂದೀಶ್ ಗುಪ್ತಾ ಸಾಹಸ ಯಾತ್ರೆ ಹೊರಟ್ಟಿದ್ದು, ಕೊರೊನಾ ಸಾಂಕ್ರಾಮಿಕದ ಲಾಕ್ಡೌನ್ ವೇಳೆಯನ್ನು ಅವಕಾಶವನ್ನಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.
ಹೌದು, ಜನವರಿ ತಿಂಗಳಲ್ಲಿ ತನ್ನ ಪತಿಯೊಂದಿಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ ನಮ್ರತಾ ಗುಪ್ತಾ ಕಾಶ್ಮೀರದಲ್ಲಿರುವ ಸುಮಾರು 50 ಆಲ್ಪೈನ್ ಲೇಕ್ಗಳ ಟ್ರೆಕ್ಕಿಂಗ್ ಅನ್ನು ಒಂದೇ ಸೀಸನ್ನಲ್ಲಿ ಮುಗಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.
ಈಟಿವಿ ಭಾರತಕ್ಕೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾನು ಪ್ರಯಾಣವನ್ನು ತುಂಬಾ ಇಷ್ಟಪಡುತ್ತೇನೆ. ನಾಲ್ಕೈದು ದಿನಗಳ ಪ್ರವಾಸಕ್ಕೆ ಬರುವಂಥಹ ವ್ಯಕ್ತಿ ನಾನಲ್ಲ. ಸ್ಥಳಗಳನ್ನು ಅನುಭವಿಸುವುದರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ. ಜನರನ್ನು ಭೇಟಿಯಾಗುವಲ್ಲಿ ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದರಲ್ಲಿ ನನಗೆ ನಂಬಿಕೆ ಇದೆ ಎಂದಿದ್ದಾರೆ.
ಕೊರೊನಾ ಸಾಂಕ್ರಾಮಿಕವು ನನಗೆ ಅವಕಾಶವನ್ನು ನೀಡಿದೆ. ಕೊರೊನಾ ರೋಗದ ವಿರುದ್ಧ ನಾನು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇನೆ. ಕಾಶ್ಮೀರಕ್ಕೆ ಬರುವುದು ನನ್ನ ಕನಸಾಗಿತ್ತು ಎಂದು ಹೇಳಿದ್ದಾರೆ.
'ಸುದ್ದಿಯಲ್ಲಿ ನೋಡಿದ್ದೇವು..'
ಕಾಶ್ಮೀರ ಪ್ರವಾಸದ ಕಾರಣ ಹೇಳಿದ ನಮ್ರತಾ 'ನನ್ನ ಪತಿ ಅಭಿಷೇಕ್ ಸುದ್ದಿಯೊಂದರಲ್ಲಿ ದಾಲ್ ಸರೋವರ ಮಂಜುಗಡ್ಡೆಯಾಗಿರುವುದು ಮತ್ತು ಹಿಮ ಸುರಿಯುತ್ತಿರುವುದನ್ನು ನೋಡಿದ್ದರು. ಅವರು ಒಂದೇ ಬಾರಿಗೆ ಎರಡನ್ನೂ ನೋಡಿರಲಿಲ್ಲ. ನಾವು ಆಗ ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೊರಡಬೇಕೆಂದು ನಿರ್ಧರಿಸಿ, ಬಂದೆವು. ಇಲ್ಲಿಗೆ ಬಂದ ನಂತರ ದಿನಗಳು ಹೇಗೆ ಕಳೆದವು ಎಂಬುದೇ ಗೊತ್ತಾಗುತ್ತಿಲ್ಲ' ಎಂದಿದ್ದಾರೆ.
ಕಾಶ್ಮೀರಕ್ಕೆ ಬರುವ ಮೊದಲು, ಕೆಲವು ಸ್ಥಳಗಳ ಪಟ್ಟಿಯನ್ನು ನಾನು ಮಾಡಿದ್ದೆನು. ಈ ಎಂಟು-ಒಂಭತ್ತು ತಿಂಗಳುಗಳಲ್ಲಿ, ನಾವು ಕಾಶ್ಮೀರದ ಎಲ್ಲಾ ಕಡೆ ಪ್ರಯಾಣಿಸಿದ್ದೇವೆ. ಟ್ರೆಕ್ಕಿಂಗ್ ಪೋಲ್ ಮತ್ತು ಶೂಗಳನ್ನು ನಾನು ತಂದಿದ್ದೇನೆ. ಅಲ್ಪೈನ್ ಸರೋವರಗಳನ್ನು ನೋಡಲು ನಾನು ಚಾರಣ ಹೊರಡಲು ಜೂನ್ನಲ್ಲಿ ಆರಂಭಿಸಿದ್ದು, ಈಗ ಸುಮಾರು 50 ಆಲ್ಪೈನ್ ಸರೋವರಗಳ ಚಾರಣ ಪೂರ್ಣಗೊಳಿಸಿದ್ದೇನೆ ಎಂದು ನಮ್ರತಾ ಹೇಳಿದ್ದಾರೆ.
'ಮನೆಯರನ್ನು ಒಪ್ಪಿಸಲು ಕಷ್ಟವಾಯಿತು..'
ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಕಾಶ್ಮೀರಕ್ಕೆ ಬರುವ ಮೊದಲು ಕುಟುಂಬ ಮತ್ತು ಸ್ನೇಹಿತರನ್ನು ಮನವೊಲಿಸುವುದು ತುಂಬಾ ಕಷ್ಟವಾಗಿತ್ತು. ನಾವು ಕೆಲವೆಡೆ ಸುತ್ತಾಡಿದ್ದನ್ನು ನೋಡಿ ಅವರೂ ಕೂಡಾ ಇಲ್ಲಿಗೆ ಬಂದಿದ್ದರು. ಎಲ್ಲರೂ ಕೆಲವೊಮ್ಮೆ ಭಯಪಡುತ್ತಾರೆ. ಆದರೆ ಅದನ್ನು ಎದುರಿಸಿ ಹೊರಬೇಕಷ್ಟೇ ಎಂದು ನಮ್ರತಾ ಹೇಳಿದ್ದಾರೆ.
ಉದ್ಯೋಗದ ವಿಚಾರವಾಗಿ ಹೇಳಿದ ಅವರು, ನಾವೀಗ ವರ್ಕ್ ಫ್ರಂ ಹೋಮ್ನಲ್ಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಮಾಡಿ, ವೀಕೆಂಡ್ಗಳಲ್ಲಿ ಟ್ರೆಕ್ಕಿಂಗ್ ಮಾಡುತ್ತೇವೆ. ಟ್ರೆಕ್ಕಿಂಗ್ ವೇಳೆ ಇಂಟರ್ನೆಟ್ ಸೌಲಭ್ಯ ಇರುವುದಿಲ್ಲ. ಅದು ದೊಡ್ಡ ವಿಚಾರವಲ್ಲ ಎಂದು ನಮ್ರತಾ ಹೇಳಿದ್ದಾರೆ.