ಮೀರತ್, ಉತ್ತರಪ್ರದೇಶ: ಕ್ರಿಕೆಟ್ ಆಡುತ್ತಿದ್ದ ವೇಳೆ 36 ವರ್ಷದ ಯುವಕನೊಬ್ಬ ಏಕಾಏಕಿ ಕ್ರೀಸ್‌ನಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಯುವಕ ಬ್ಯಾಟಿಂಗ್ ಮಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತ್ತು. ಅವರು 15 ನಿಮಿಷಗಳ ಕಾಲ ವಿರಾಮ ತೆಗೆದುಕೊಂಡು ಮತ್ತೆ ಬ್ಯಾಟಿಂಗ್ ಮಾಡಲು ಬಂದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ?: ಭಾನುವಾರ ಮೀರತ್‌ನ ಗಾಂಧಿ ಬಾಗ್ ಮೈದಾನದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಓಲ್ಡ್ ಗನ್ ವರ್ಸಸ್ ಬ್ಲಾಸ್ಟ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಟಾಸ್ ಗೆದ್ದ ಓಲ್ಡ್ ಗನ್ ತಂಡಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ಇಂದಿರಾನಗರದ ಮಾಧವಪುರಂ ನಿವಾಸಿ ದುಷ್ಯಂತ್ ಶರ್ಮಾ ಓಲ್ಡ್ ಗನ್ ತಂಡ ಆರಂಭಿಕರಾಗಿ ಮೈದಾನಕ್ಕೆ ಬಂದಿದ್ದರು. ದುಷ್ಯಂತ್ 4.2 ಓವರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿತು. ಆಗ ಅವರು ಬ್ಯಾಟಿಂಗ್ ಅನ್ನು ಅರ್ಧಕ್ಕೆ ಮೊಟುಕುಗೊಳಿಸಿ ವಿಶ್ರಾಂತಿಗಾಗಿ ಮೈದಾನದಿಂದ ಹೊರ ಬಂದರು. ಸಹ ಆಟಗಾರರು ದುಷ್ಯಂತ್ ಶರ್ಮಾ ಅವರನ್ನು ವೈದ್ಯರ ಬಳಿಗೆ ಹೋಗುವಂತೆ ಕೇಳಿದರು. ಆದರೆ ಅವರು ‘ಬೇಡ, ನಾನು ಚೆನ್ನಾಗಿದ್ದೇನೆ’ ಎಂದು ಹೇಳಿದ್ದರು. ಸುಮಾರು 15 ನಿಮಿಷಗಳ ವಿಶ್ರಾಂತಿಯ ನಂತರ ದುಷ್ಯಂತ್ ಮತ್ತೆ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಮರಳಿದ್ದರು. ಅವರು ಚೆನ್ನಾಗಿಯೇ ಬ್ಯಾಟಿಂಗ್ ಮಾಡುತ್ತಿದ್ದರು. 7ನೇ ಓವರ್ ಆಡುವಾಗ ಅವರ ಸ್ಥಿತಿ ಹದಗೆಟ್ಟಿದ್ದು, ಇದ್ದಕ್ಕಿದ್ದಂತೆ ಕ್ರೀಸ್‌ನಲ್ಲಿ ಕುಸಿದು ಬಿದ್ದರು.
ಸ್ನೇಹಿತರು ದುಷ್ಯಂತ್ ಅವರನ್ನು ಲಾಲ್ಕುರ್ಟಿಯ ಮೆಟ್ರೋ ಆಸ್ಪತ್ರೆಗೆ ಕರೆದೊಯ್ದರು. ದುಷ್ಯಂತ್ ಅವರನ್ನು ಪರೀಕ್ಷೆ ನಡೆಸಿದ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ದುಷ್ಯಂತ್ ಅವರ ಸಹೋದ್ಯೋಗಿಗಳು ಘಟನೆಯ ಬಗ್ಗೆ ಆತನ ತಂದೆ ವಿಜೇಂದ್ರ ಮತ್ತು ಕಿರಿಯ ಸಹೋದರ ಶಶಾಂಕ್ ಶರ್ಮಾ ಅವರಿಗೆ ಮಾಹಿತಿ ತಿಳಿಸಿದರು. ಸುದ್ದಿ ತಿಳಿದಾಕ್ಷಣವೇ ಕುಟುಂಬ ಸದಸ್ಯರು ಆಸ್ಪತ್ರೆಗೆ ದೌಡಾಯಿಸಿದರು. ದುಷ್ಯಂತ್ ಅವರಿಗೆ ಎದೆನೋವು ಅಥವಾ ಯಾವುದೇ ರೀತಿಯ ಹೃದ್ರೋಗ ಇರಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ.
ಅವರು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದರು. ಕಳೆದ 4 ವರ್ಷಗಳಿಂದ ದುಷ್ಯಂತ್ ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದರು ಎಂದು ಸಹ ಆಟಗಾರ ಪುಷ್ಪೇಂದ್ರ ಹೇಳಿದ್ದಾರೆ. ಇಂತಹ ಘಟನೆ ಎಂದಿಗೂ ಸಂಭವಿಸಿರಲಿಲ್ಲ. ಅವರು ಭಾನುವಾರ ಮೈದಾನದಲ್ಲಿದ್ದಾಗ ದುಷ್ಯಂತ್ ಫಿಟ್ ಆಗಿ ಕಾಣುತ್ತಿದ್ದರು. ಇದೆಲ್ಲ ಇದ್ದಕ್ಕಿದ್ದಂತೆ ಸಂಭವಿಸಿತು. ನಗರದ ವೃತ್ತಿಪರರು ಒಟ್ಟಾಗಿ ಸೇರಿ ಈ ಎರಡು ತಂಡಗಳನ್ನು ರಚಿಸಿದ್ದಾರೆ. ಫಿಟ್ ಆಗಿರಲು ಆಗಾಗ ಪಂದ್ಯವನ್ನು ಆಡುತ್ತಿರುತ್ತವೆ. ದುಷ್ಯಂತ್ ಅವರ ಕಿರಿಯ ಸಹೋದರನಿಗೆ ಪ್ರಸ್ತುತ 16 ವರ್ಷ. ದುಷ್ಯಂತ್ ಅವರಿಗೆ ಪತ್ನಿ ಮತ್ತು ಒಂದೂವರೆ ವರ್ಷದ ಮಗ ಮಾಧವ್ ವರ್ಮಾ ಇದ್ದಾನೆ. ದುಶ್ಯಂತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯ ಸಂಜೀವ್ ತಿಳಿಸಿದ್ದಾರೆ.
ಓದಿ: ಪ್ಯಾಲಿಸ್ತೇನ್ ಜನತೆ ಬೆಂಬಲಕ್ಕೆ ಮುಂದಾದ ಕ್ರಿಕೆಟರ್ ಖವಾಜಾಗೆ ಐಸಿಸಿ ಅನುಮತಿ ನಿರಾಕರಣೆ