ಕರೀಂನಗರ(ತೆಲಂಗಾಣ): ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜಿನ 42ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವಿದ್ಯಾರ್ಥಿಗಳನ್ನು ಕ್ವಾರಂಟೈನ್ಗೆ ಒಳಪಡಿಸಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿವರ:
ಕಾಲೇಜಿನಲ್ಲಿ ಇತ್ತೀಚೆಗೆ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು. ಈ ಸಮಾರಂಭದಲ್ಲಿ ಯಾರೂ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನೂ ಕಾಪಾಡಿಕೊಂಡಿರಲಿಲ್ಲ. ಕೆಲವು ವೈದ್ಯಾಧಿಕಾರಿಗಳು ಕೊರೊನಾ ರೋಗಲಕ್ಷಣ ಇರುವವರನ್ನು ಗುರುತಿಸಿದ್ದಾರೆ. ನಂತರ ಕಾಲೇಜು ಆಡಳಿತ ಮಂಡಳಿಗೆ ಈ ಸುದ್ದಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾತ್ರಿಯಿಡೀ ರೇವ್ ಪಾರ್ಟಿ: ಬೆಂಗಳೂರಿಗರು ಸೇರಿ 25ಕ್ಕೂ ಹೆಚ್ಚು ಜನರ ಬಂಧನ
ವೈದ್ಯಾಧಿಕಾರಿಗಳ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿತು. ಇದರಲ್ಲಿ 42 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿರುವುದು ಬೆಳಕಿಗೆ ಬಂದಿದೆ. ಇನ್ನು ಕೆಲವರ ವರದಿ ಬರಬೇಕಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕಾಲೇಜಿನಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿದ್ದಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದೆ. ಸೋಂಕು ಹೊಂದಿದವರಲ್ಲಿ ಯಾರೊಬ್ಬರೂ ತೀವ್ರ ಸ್ವರೂಪದ ರೋಗಲಕ್ಷಣಗಳನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ.