ಮುಂಬೈ (ಮಹಾರಾಷ್ಟ್ರ): ಪ್ರತಿಯೊಂದು ಅತ್ಯಾಚಾರ ಪ್ರಕರಣದಲ್ಲೂ ವೈದ್ಯಕೀಯ ಸಾಕ್ಷ್ಯದ ಅಗತ್ಯವಿಲ್ಲ ಎಂದು ಮುಂಬೈನ ಸೆಷನ್ ನ್ಯಾಯಾಲಯದ ವಿಶೇಷ ಪೋಕ್ಸೋ ಕೋರ್ಟ್ ಅಭಿಪ್ರಾಯಪಟ್ಟಿದ್ದು ಆರೋಪಿಗೆ ಜಾಮೀನು ನಿರಾಕರಿಸಿದೆ.
ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಆರೋಪದ ಪ್ರಕರಣದ ಆರೋಪಿ, 45 ವರ್ಷದ ವ್ಯಕ್ತಿಯೋರ್ವ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ. ಅತ್ಯಾಚಾರ ಪ್ರಕರಣ ದಾಖಲಾದ ಮೇಲೂ ಸಂತ್ರಸ್ತೆಯು ವೈದ್ಯಕೀಯ ತಪಾಸಣೆಗೆ ಒಳಗಾಗಿಲ್ಲ ಮತ್ತು ಆಕೆಯ ಹೇಳಿಕೆ ಪಿತೂರಿಯಿಂದ ಕೂಡಿದೆ ಎಂದು ಹೇಳಿ ಜಾಮೀನು ಕೋರಿದ್ದ.
ಆದರೆ, ನ್ಯಾಯಾಧೀಶೆ ಪ್ರೀತಿ ಕುಮಾರ್ ಘುಳೆ ಅವರು ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿದ್ದು, ಎಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ವೈದ್ಯಕೀಯ ಸಾಕ್ಷ್ಯದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಸಂತ್ರಸ್ತ ಬಾಲಕಿ ಮತ್ತು ಆರೋಪಿಯ ನಡುವಿನ ವಯಸ್ಸಿನ ಅಂತರವನ್ನೂ ನ್ಯಾಯಾಧೀಶರು ಗಮನಿಸಿದ್ದಾರೆ.
ಪ್ರಕರಣದ ಹಿನ್ನೆಲೆ ಹೀಗಿದೆ..: ಸಾಮಾಜಿಕ ಜಾಲತಾಣದಲ್ಲಿ ಆರೋಪಿಗೆ ಬಾಲಕಿಯೊಬ್ಬಳ ಪರಿಚಯವಾಗಿತ್ತು. ಇಬ್ಬರ ನಡುವೆ 31 ವರ್ಷಗಳ ವಯಸ್ಸಿನ ಅಂತರವಿದೆ. ಆದರೆ, ಆರೋಪಿಯು ತನ್ನ ವಯಸ್ಸನ್ನು 25 ವರ್ಷದ ಎಂದು ಹೇಳಿಕೊಂಡಿದ್ದ. ಜೊತೆಗೆ ಮೊಬೈಲ್ ಉಡುಗೊರೆ ಕೊಡುವುದಾಗಿ ಮತ್ತು ಮದುವೆ ಆಗುವುದಾಗಿ ಆಕೆಯನ್ನು ಭೇಟಿ ಮಾಡುತ್ತಿದ್ದ. ಇದಾದ ನಂತರ ಬಾಲಕಿಯ ನಡವಳಿಕೆಯಲ್ಲಿ ಬದಲಾವಣೆ ಗಮನಿಸಿದ ಪೋಷಕರು ವಿಚಾರಣೆ ನಡೆಸಿದಾಗ ಆತಂಕಕಾರಿ ವಿಷಯ ಬಹಿರಂಗವಾಗಿತ್ತು.
2019ರ ಜನವರಿಯಲ್ಲಿ ಆರ್ಸಿಎಫ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಷಕರು ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ: ಶಿಕ್ಷಕನ ಬಂಧನ