ಗ್ರೇಟರ್ ನೋಯ್ಡಾ: ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆಯುವ ಪ್ರಯತ್ನವಾಗಿ, ಮಾರುತಿ ಸುಜುಕಿ ಇಂಡಿಯಾ ಗುರುವಾರ ತನ್ನ ಎರಡು ಹೊಸ ಉತ್ಪನ್ನಗಳಾದ ಜಿಮ್ನಿ ಮತ್ತು ಫ್ರಾಂಕ್ಸ್ ವಾಹನಗಳನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ (SUV) ವಲಯದಲ್ಲಿ ತನ್ನ ಅಸ್ತಿತ್ವ ಹೆಚ್ಚಿಸುವ ಮೂಲಕ ದೇಶೀಯ ಪ್ರಯಾಣಿಕ ವಾಹನ ವಿಭಾಗದಲ್ಲಿ ಶೇಕಡಾ 50 ರಷ್ಟು ಮಾರುಕಟ್ಟೆ ಪಾಲನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.
ಆಟೋ ಎಕ್ಸ್‌ಪೋ 2023 ರಲ್ಲಿ ಜಿಮ್ನಿ ಮತ್ತು ಫ್ರಾಂಕ್ಸ್ ವಾಹನಗಳನ್ನು ಅನಾವರಣಗೊಳಿಸಿ ಮಾತನಾಡಿದ ಮಾರುತಿ ಸುಜುಕಿ ಇಂಡಿಯಾ ಎಂಡಿ ಮತ್ತು ಸಿಇಒ ಹಿಸಾಶಿ ಟಕೆಯುಚಿ, ಕಂಪನಿಯ ಮಧ್ಯಮ ಅವಧಿಯ ಗುರಿಯು ಶೇಕಡಾ 50 ರಷ್ಟು ಮಾರುಕಟ್ಟೆ ಪಾಲನ್ನು ಮರಳಿ ಪಡೆಯುವುದು ಮತ್ತು ಎಸ್‌ಯುವಿ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸುವುದಾಗಿದೆ ಎಂದು ಹೇಳಿದರು. ಈ ಗುರಿಗಳನ್ನು ಪೂರೈಸುವ ನಿಟ್ಟಿನಲ್ಲಿ ಕಂಪನಿ ಇಂದು ಎರಡು ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಿದೆ ಎಂದು ಅವರು ಹೇಳಿದರು.
2023-24ನೇ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ಎಸ್‌ಯುವಿ ವಿಭಾಗದಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆಯಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಟೇಕುಚಿ ಹೇಳಿದರು. ಭಾರತೀಯ ಮಾರುಕಟ್ಟೆಯಲ್ಲಿ SUV ಗಳ ಖರೀದಿಗೆ ಗ್ರಾಹಕರು ಆದ್ಯತೆ ನೀಡುತ್ತಿರುವುದನ್ನು ಅವರು ಉಲ್ಲೇಖಿಸಿದರು. ಕಂಪನಿಯು ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್‌ಯುವಿಗಳಾದ ಗ್ರ್ಯಾಂಡ್ ವಿಟಾರಾ ಮತ್ತು ಬ್ರೆಜ್ಜಾ ಮಾರುಕಟ್ಟೆಯಲ್ಲಿ ಅದ್ಭುತ ಪ್ರತಿಕ್ರಿಯೆ ಪಡೆದಿವೆ. ಅಲ್ಲದೇ ಇವುಗಳಿಗೆ ಮಾರುಕಟ್ಟೆಯಲ್ಲಿ ಗ್ರಾಹಕರಿಂದ ಉತ್ತಮವಾದ ಬೇಡಿಕೆಯಿದೆ ಎಂದು ಅವರು ಹೇಳಿದರು.
ಜಿಮ್ನಿ ಅರ್ಧ ಶತಮಾನದ ಪರಂಪರೆ ಹೊಂದಿದೆ. ಸುಜುಕಿ ಕಂಪನಿಯು 3.2 ಮಿಲಿಯನ್ ಜಿಮ್ನಿ ವಾಹನಗಳನ್ನು ವಿಶ್ವಾದ್ಯಂತದ 199 ದೇಶಗಳು ಮತ್ತು ಪ್ರದೇಶಗಳಲ್ಲಿ ಮಾರಾಟ ಮಾಡಿದೆ. ಆದರೆ, ಜಿಮ್ನಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು, ಅದನ್ನು ಭಾರತೀಯ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಿರ್ಮಿಸಬೇಕಾಗಿತ್ತು ಎಂದು ಟೇಕುಚಿ ನುಡಿದರು. ಜಿಮ್ನಿ ಫೈವ್ ಡೋರ್ ವಿನ್ಯಾಸದಲ್ಲಿ ಇಂದು ಭಾರತದಲ್ಲಿ ಮೊದಲ ಬಾರಿಗೆ ಅನಾವರಣಗೊಳ್ಳುತ್ತಿದೆ. ಇದು ಆಲ್ ಟೆರೇನ್, ದೃಢವಾದ, ಕಾಂಪ್ಯಾಕ್ಟ್ ಲೈಫ್‌ಸ್ಟೈಲ್ ಎಸ್‌ಯುವಿಯಾಗಿದೆ. ನಿಜವಾದ ಅರ್ಥದಲ್ಲಿ ಎಸ್‌ಯುವಿ ಆಗಿರುವ ಇದು 4 ವೀಲ್ ಡ್ರೈವ್ ವಾಹನ ಕಠಿಣವಾದ ಭೂಪ್ರದೇಶಗಳಲ್ಲಿ ಸುಲಭವಾಗಿ ಸಾಗಬಲ್ಲದು ಎಂದು ಅವರು ಹೇಳಿದರು.
ಫ್ರಾಂಕ್ಸ್ ವಾಹನ ಹೊಸ ಒಂದು - ಲೀಟರ್ ಟರ್ಬೊ ಬೂಸ್ಟರ್‌ಜೆಟ್ ಡೈರೆಕ್ಟ್ ಇಂಜೆಕ್ಷನ್ ಎಂಜಿನ್ ಅನ್ನು ಹೊಂದಿದೆ. ಕಂಪನಿಯು ತನ್ನ ನೆಕ್ಸಾ ರಿಟೇಲ್ ಔಟ್‌ಲೆಟ್‌ಗಳ ಮೂಲಕ ಮಾರಾಟವಾಗುವ ಎರಡೂ ಮಾದರಿಗಳ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಿತರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. ಕಳೆದ ಹಣಕಾಸು ವರ್ಷದಲ್ಲಿ, ಎಸ್‌ಯುವಿ ವಲಯದಲ್ಲಿ ಮಾರುತಿ ಸುಜುಕಿಯ ಮಾರುಕಟ್ಟೆ ಪಾಲು ಕೇವಲ ಶೇಕಡಾ 10.9 ರಷ್ಟಿತ್ತು ಎಂದು ಟೇಕುಚಿ ಮಾಹಿತಿ ನೀಡಿದರು.
SUV ಮಾರುಕಟ್ಟೆಯಲ್ಲಿ ಕಂಪನಿಯು ಕಡಿಮೆ ಪಾಲು ಹೊಂದಿರುವುದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದಲ್ಲಿ ಒಟ್ಟಾರೆ ಮಾರುಕಟ್ಟೆ ಷೇರಿನ ಕುಸಿತಕ್ಕೆ ಕಾರಣವಾಗಿದೆ. 2019 ರ ಹಣಕಾಸು ವರ್ಷದಲ್ಲಿ ಶೇಕಡಾ 51 ರಿಂದ, ಈ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಮಾರುಕಟ್ಟೆ ಪಾಲು ಸುಮಾರು 42 ಶೇಕಡಾಕ್ಕೆ ಇಳಿದಿದೆ.
ಇದನ್ನೂ ಓದಿ: ಮೆಕ್ಯಾನಿಕ್ ಕೈಚಳಕದಲ್ಲಿ 'ಲಂಬೋರ್ಗಿನಿ'ಯಾದ ಮಾರುತಿ ಸ್ವಿಫ್ಟ್.. ಅಸ್ಸೋಂ ಸಿಎಂಗೆ ಗಿಫ್ಟ್