ತಿರುವನಂತಪುರಂ(ಕೇರಳ): 1954ರ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆ ನೋಂದಾಯಿಸಿಕೊಳ್ಳಲು ಕೇರಳ ಹೈಕೋರ್ಟ್ ಅವಕಾಶ ನೀಡಿದೆ. ನ್ಯಾಯಮೂರ್ತಿಗಳಾದ ಎ. ಮುಹಮ್ಮದ್ ಮುಸ್ತಾಕ್ ಹಾಗೂ ಕೌಸರ್ ಎಡಪ್ಪಗತ್ ಅವರ ವಿಭಾಗೀಯ ಪೀಠ ಇದರ ವಿಚಾರಣೆ ನಡೆಸಿ ಈ ತೀರ್ಪು ನೀಡಿದ್ದು, ನಾಳೆ ಕೂಡ ಇದರ ವಿಚಾರಣೆ ನಡೆಯಲಿದೆ.
ತಂತ್ರಜ್ಞಾನದ ಯುಗದಲ್ಲಿ ಎಸ್ಎಮ್ಎ(SMA) ಅಡಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಳ್ಳಲು ನಮಗೆ ಯಾವುದೇ ರೀತಿಯ ಕಷ್ಟವಿಲ್ಲ. ಆನ್ಲೈನ್ ಮೂಲಕ ಈ ಕೆಲಸ ಮಾಡಬಹುದಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ದೇಶದಲ್ಲಿ ಪ್ರತಿಯೊಂದು ಮದುವೆ ಕಡ್ಡಾಯವಾಗಿ ನೋಂದಣಿಯಾಗಬೇಕು. ತಾಂತ್ರಿಕ ಯುಗದಲ್ಲಿ ಇದು ಸಾಧ್ಯ ಎಂದು ವಿಭಾಗೀಯ ಪೀಠ ತಿಳಿಸಿದೆ.
ಇದನ್ನೂ ಓದಿರಿ: ಮಲಯಾಳಂ ಆಡುಭಾಷೆ ಪದ ಬಳಸಿದ್ದಕ್ಕಾಗಿ ಡಿಜಿಪಿಗೆ ಸುತ್ತೋಲೆ ಹೊರಡಿಸಲು ಕೇರಳ ಹೈಕೋರ್ಟ್ ಸೂಚನೆ
ವಿಚಾರಣೆ ವೇಳೆ ಸುಪ್ರೀಂಕೋರ್ಟ್ ತೀರ್ಪು ಉಲ್ಲೇಖಿಸಿರುವ ಕೋರ್ಟ್, ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷ್ಯಗಳನ್ನ ದಾಖಲಿಸಬಹುದಾಗಿದೆ ಎಂದು ಆದೇಶಿಸಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ ಆನ್ಲೈನ್ ಮೂಲಕವೇ ಎಲ್ಲ ಪ್ರಕ್ರಿಯೆ ನಡೆಸಲು ಒಲವು ತೋರುತ್ತಿದೆ. ಆದರೆ ಇದಕ್ಕೆ ಜನರಿಂದ ಪ್ರತಿರೋಧ ವ್ಯಕ್ತವಾಗುತ್ತಿರುವುದು ಮಾತ್ರ ಕಳವಳಕಾರಿಯಾಗಿದೆ ಎಂದು ಕೋರ್ಟ್ ವಿವರಿಸಿದೆ.