ನಮಕ್ಕಲ್ (ತಮಿಳುನಾಡು): ಮದುವೆ ಎಂಬುವುದು ನೂರಾರು ಜನುಮದ ಅನುಬಂಧ ಎಂದೇ ನಂಬಲಾಗುತ್ತದೆ. ಆದರೆ, ತಮಿಳುನಾಡಿನ ಓರ್ವ ಮಹಿಳೆಯು ಸರಣಿ ಮದುವೆಗಳನ್ನಾಗಿ ಗಂಡಂದಿರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಏಳನೇ ಮದುವೆಯಾಗುತ್ತಿದ್ದಾಗಲೇ ಆರನೇ ಗಂಡ ಮೋಸಗಾತಿಯನ್ನು ಹಿಡಿದಿದ್ದಾರೆ.
ಹೌದು, ನಮಕ್ಕಲ್ ಜಿಲ್ಲೆಯ ಪರಮತಿವೆಲ್ಲೂರು ಸಮೀಪದ ಕಳ್ಳಿಪಾಳ್ಯಂನ ನಿವಾಸಿಯಾದ ಧನಪಾಲ್ ಎಂಬುವವರು ಇದೇ ತಿಂಗಳ ಆರಂಭದಲ್ಲಿ ಮಧುರೈ ಜಿಲ್ಲೆಯ ಸಂಧ್ಯಾ (26 ವರ್ಷ) ಎಂಬುವವರನ್ನು ಮದುವೆಯಾಗಿದ್ದರು. ಸಂಧ್ಯಾ ಕಡೆಯಿಂದ ಕೆಲವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕೆಲವೇ ದಿನಗಳಲ್ಲಿ ಸಂಧ್ಯಾ ಧನಪಾಲ್ ಮನೆಯಿಂದ ಕಾಣೆಯಾಗಿದ್ದರು. ಆಕೆಯ ಮೊಬೈಲ್ ಸಂಖ್ಯೆ ಮತ್ತು ಆಕೆಯ ಕೆಲವು ಸಂಬಂಧಿರನ್ನು ಸಂಪರ್ಕಿಸಲು ಧನಪಾಲ್ ಯತ್ನಿಸಿದ್ದರು. ಆದರೆ, ಎಲ್ಲ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು.
ಆಭರಣ, ಬೆಲೆಬಾಳುವ ವಸ್ತುಗಳೂ ನಾಪತ್ತೆ: ಧನಪಾಲ್ ಮನೆಯಿಂದ ಸಂಧ್ಯಾ ಮಾತ್ರ ಕಾಣೆಯಾಗಿರಲಿಲ್ಲ. ಧನಪಾಲ್ ಮನೆಯಲ್ಲಿದ್ದ ಆಭರಣಗಳು ಮತ್ತು ಬೆಲೆಬಾಳುವ ಉತ್ಪನ್ನಗಳು ಕೂಡ ಸಂಧ್ಯಾರೊಂದಿಗೆ ನಾಪತ್ತೆಯಾಗಿದ್ದವು. ಮತ್ತೊಂದು ಅಚ್ಚರಿ ಎಂದರೆ ಧನಪಾಲ್ ಮದುವೆಗೆ ವಧುವಿನ ಹುಡುಕಾಟಕ್ಕಾಗಿ ಬ್ರೋಕರ್ ಬಾಲಮುರುಗನ್ ಎಂಬುವವರಿಗೆ 1.5 ಲಕ್ಷ ರೂ. ಹಣವನ್ನು ನೀಡಿದ್ದರು!.
![marriage-fraud-girl-caught-red-handed-during-7th-marriage-by-6th-husband](https://etvbharatimages.akamaized.net/etvbharat/prod-images/16453743_thumbna1111.jpg)
ಮತ್ತೊಬ್ಬ ಬ್ರೋಕರ್ ಬಳಿ ಸಂಧ್ಯಾ ಫೋಟೋ!: ಮನೆಯಿಂದ ಸಂಧ್ಯಾ ಹಾಗೂ ಮನೆಯಲ್ಲಿನ ಆಭರಣಗಳು, ಬೆಲೆಬಾಳುವ ವಸ್ತುಗಳು ನಾಪತ್ತೆ ಬಗ್ಗೆ ಧನಪಾಲ್ ಪರಮತಿ ವೆಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಎರಡು ದಿನಗಲ್ಲಿ ಪರಮತಿ ವೆಲ್ಲೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ವಧುವಿನ ಹುಡುಕಾಟದಲ್ಲಿದ್ದಾಗ ಮತ್ತೊಬ್ಬ ಬ್ರೋಕರ್ ಧನಲಕ್ಷ್ಮಿ ಎಂಬುವವರಿಗೆ ಸಂಧ್ಯಾರ ಫೋಟೋ ಸಿಕ್ಕಿದೆ.
ವಂಚಕಿಯ ಹಿಡಿಯಲು ಮದುವೆಯ ಪ್ಲಾನ್: ಈ ವಿಷಯ ಅದು ಹೇಗೋ ಧನಪಾಲ್ಗೆ ಗೊತ್ತಾಗಿದೆ. ಅಂತೆಯೇ, ಧನಪಾಲ್ ಆ ವ್ಯಕ್ತಿಯನ್ನು ಭೇಟಿ ಮಾಡಿ ಎಲ್ಲ ವಿಷಯಗಳನ್ನು ತಿಳಿಸಿದ್ದಾರೆ. ಅಂತೆಯೇ ಸಂಧ್ಯಾರನ್ನು ಹಿಡಿಯಲು ಇಬ್ಬರೂ ಕೂಡಿ ಪ್ಲಾನ್ ರೂಪಿಸಿದ್ದಾರೆ. ತಮ್ಮ ಪ್ಲಾನ್ನಂತೆಯೇ ಇದೇ 22ರಂದು ತಿರುಚೆಂಗೋಡಿನಲ್ಲಿ ಮದುವೆಯಾಗುವುದಾಗಿ ಸಂಧ್ಯಾರಿಗೆ ಆ ವ್ಯಕ್ತಿ ತಿಳಿಸಿ ಎಲ್ಲ ಸಿದ್ಧತೆಗಳನ್ನು ಮಾಡಿದ್ದಾರೆ.
ಮದುವೆ ವಂಚನೆಯಲ್ಲಿ ಬ್ರೋಕರ್ಗಳು ಭಾಗಿ: ಇತ್ತ, ಧನಪಾಲ್ ಸಂಧ್ಯಾರನ್ನು ಹಿಡಿಯಲು ಪೊಲೀಸರೊಂದಿಗೆ ಮದುವೆ ಮಂಟಪದಲ್ಲಿ ಕಾದು ಕುಳಿತಿದ್ದರು. ಮದುವೆಯಾಗಲು ಸಂಧ್ಯಾ ಹಾಗೂ ಆಕೆಯ ಸಂಬಂಧಿಕರಾದ ಅಯ್ಯಪ್ಪನ್, ಜಯವೇಲ್ ಮತ್ತು ಬ್ರೋಕರ್ ಧನಲಕ್ಷ್ಮಿ ಬರುತ್ತಿದ್ದಂತೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಸಂಧ್ಯಾ ಈಗಾಗಲೇ 5 ಜನರೊಂದಿಗೆ ಮದುವೆಯಾಗಿದ್ದು, ಧನಪಾಲ್ ಆರನೆಯವರಾಗಿದ್ದರು. ಈಗ ಏಳನೇ ಮದುವೆಯಾಗಲು ಮುಂದಾಗಿದ್ದರು ಎಂದು ಬಯಲಾಗಿದೆ.
ಮದುವೆ ವಂಚನೆಗಳಲ್ಲಿ ಸಂಧ್ಯಾ ಮತ್ತು ಬ್ರೋಕರ್ ಸೇರಿದಂತೆ ಸಂಬಂಧಿಕರೆಲ್ಲರೂ ಭಾಗಿಯಾಗಿದ್ದರು. ಮದುವೆಯಾಗಿ ಒಂದೆರಡು ದಿನಗಳಲ್ಲಿ ಮನೆಯ ಲೂಟಿ ಮಾಡಿ ಪರಾರಿಯಾಗುತ್ತಿದ್ದರು. ಸದ್ಯ ನಾಲ್ವರನ್ನೂ ಜೈಲಿಗೆ ಕಳುಹಿಸಿರುವ ಪೊಲೀಸರು, ಮತ್ತೊಬ್ಬ ಬ್ರೋಕರ್ ಬಾಲಮುರುಗನ್ಗೂ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಮದುವೆ ನಾಟಕವಾಡಿ ಗಂಡನ ಮನೆಯಿಂದ ನಗ, ನಾಣ್ಯ ದೋಚುವ ಚೆಲುವೆ: 31ನೇ ಶಾದಿಯಲ್ಲಿ ಸೆರೆ