ಮುಂಬೈ: ಮರಾಠಾ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ದಿನ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸತ್ಯಾಗ್ರಹಕ್ಕೆ ನವಿ ಮುಂಬೈನ ಎಪಿಎಂಸಿ ಮಾರುಕಟ್ಟೆಯ ಕಾರ್ಮಿಕರು ಸೇರಿ ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ನಾಗರಿಕರಿಗೆ ಆಹಾರದ ಕೊರತೆಯಾಗದಂತೆ ಎಲ್ಲ ಕಾರ್ಮಿಕರು ಸಾಂಕೇತಿಕ ಮುಷ್ಕರಕ್ಕೆ ಇಳಿದಿದ್ದಾರೆ. ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳನ್ನು ಹೊರತುಪಡಿಸಿ ಇಲ್ಲಿಯ ಪ್ರಮುಖ ಮೂರು ಮಾರುಕಟ್ಟೆಗಳನ್ನು ಬಂದ್ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ನೀರು ಕೂಡಾ ಸೇವಿಸದಿರುವ ಮನೋಜ್, ಇಂದು ವೈದ್ಯರಿಂದ ತಪಾಸಣೆಗೆ ನಿರಾಕರಿಸಿದರು.
''ಶಿಕ್ಷಣ ಸಂಸ್ಥೆ ಮತ್ತು ಉದ್ಯೋಗಗಳಲ್ಲಿ ಮರಾಠರಿಗೆ ಮೀಸಲಾತಿ ಕಲ್ಪಿಸಿಕೊಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ 40 ದಿನಗಳ ಗಡುವು ನೀಡಲಾಗಿತ್ತು. ಈ ಗಡುವು ಮುಕ್ತಾಯಗೊಂಡಿದೆ. ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲುವುದಿಲ್ಲ. ಇಲ್ಲಿನ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿ ಉದ್ದೇಶಪೂರ್ವಕವಾಗಿಯೇ ಮರಾಠಾ ಮೀಸಲಾತಿ ವಿಷಯ ಪ್ರಸ್ತಾಪಿಸದಿರುವುದು ನೋವು ತಂದಿದೆ. ನಮಗೆ ಪ್ರಧಾನಿ ಮೋದಿ ಬಗ್ಗೆ ಗೌರವವಿದೆ. ಈ ವಿಷಯವನ್ನು ಪ್ರಸ್ತಾಪ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದೆವು. ಆದರೆ, ಅದೆಲ್ಲವೂ ಸುಳ್ಳಾಗಿದೆ. ಅಲ್ಲದೇ ಈ ವಿಚಾರದಲ್ಲಿ ಸಿಎಂ ಮತ್ತು ಡಿಸಿಎಂ ಮರಾಠಾ ಯುವಕರ ವಿರುದ್ಧ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದ ಜನರ ನಂಬಿಕೆ ಪದೇ ಪದೇ ಹುಸಿಯಾಗುತ್ತಿದೆ. ಇಷ್ಟು ಕಾಲಾವಕಾಶ ನೀಡಿದರೂ ಮರಾಠ ಮೀಸಲಾತಿ ನೀಡಲಿಲ್ಲ'' ಎಂದು ಮನೋಜ್ ಜಾರಂಗೆ ಪಾಟೀಲ್ ಆರೋಪಿಸಿದರು.
''ಮರಾಠರನ್ನು ಕುಂಬಿ ಜಾತಿ ಎಂದು ಘೋಷಿಸಲು ಮತ್ತು ಅವರಿಗೆ ಮೀಸಲಾತಿ ನೀಡುವಂತೆ 10,000ಕ್ಕೂ ಹೆಚ್ಚು ದಾಖಲೆಗಳನ್ನು ನೀಡಿದ್ದೇವೆ. ಆದರೆ, ಅದನ್ನು ರಾಜ್ಯ ಸರ್ಕಾರ ಇನ್ನೂ ಮಾಡಿಲ್ಲ. ಇದು ಮೀಸಲಾತಿ ನಿರಾಕರಿಸುವ ಕುತಂತ್ರವನ್ನು ಸೂಚಿಸುತ್ತದೆ. ಕಳೆದ 10 ವರ್ಷಗಳಿಂದ ವಿಚಾರ ನೆನೆಗುದಿಗೆ ಬಿದ್ದಿದೆ. ಹೋರಾಟದಲ್ಲಿ ಈ ಬಾರಿ “ನನ್ನ ಶವಯಾತ್ರೆಯನ್ನು ಹೊರತರಲಾಗುವುದು ಇಲ್ಲವೇ, ಮರಾಠರ ವಿಜಯಯಾತ್ರೆ ನಡೆಸಲಾಗುವುದು” ಎಂದು ನಾನು ಈಗಾಗಲೇ ಹೇಳಿದ್ದೇನೆ. ಅದರಂತೆ ಹೋರಾಟ ಮುಂದುವರೆಯಲಿದೆ. ಅಲ್ಲದೇ ಮೀಸಲಾತಿ ಘೋಷಿಸಲು ರಾಜ್ಯ ಸರ್ಕಾರಕ್ಕೆ ನೀಡಲಾಗಿದ್ದ 40 ದಿನಗಳ ಗಡುವು ಮುಗಿದಿದೆ. ಅಕ್ಟೋಬರ್ 25ರಿಂದ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ಈ ಬಾರಿ ನಾನು ಯಾವುದೇ ವೈದ್ಯಕೀಯ ಚಿಕಿತ್ಸೆ ತೆಗೆದುಕೊಳ್ಳುವುದಿಲ್ಲ. ನೀರು ಕುಡಿಯುವುದಿಲ್ಲ. ನಮ್ಮ ಪ್ರತಿಭಟನೆ ತೀವ್ರಗೊಳ್ಳಲಿದೆ'' ಎಂದರು.
ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಶಿರಡಿ ಕ್ಷೇತ್ರಕ್ಕೆ ಗುರುವಾರ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾಯಿಬಾಬಾ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿದ್ದರು.
ಜಾರಂಗೆ ಪಾಟೀಲ್ ಅವರ ಉಪವಾಸ ಸತ್ಯಾಗ್ರಹದಿಂದ ರಾಜ್ಯ ಸರ್ಕಾರಕ್ಕೆ ತಲೆಬಿಸಿಯಾಗಿದೆ. ಅಧಿಕಾರಿಗಳು, ಸಚಿವರು ಮತ್ತಿತರ ಮುಖಂಡರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಶಿರಡಿ ಸಾಯಿಬಾಬಾಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ; ₹109 ಕೋಟಿ ವೆಚ್ಚದ ಅತ್ಯಾಧುನಿಕ ದರ್ಶನ ಹಾದಿ ಉದ್ಘಾಟನೆ