ಪೂರ್ವ ಗೋದಾವರಿ (ಆಂಧ್ರಪ್ರದೇಶ): ಸಿಪಿಐ-ಮಾವೋವಾದಿ ಪಕ್ಷದ ಕಾಲುಮಾ ನಂದೇ ಅಲಿಯಾಸ್ ಸುಶೀಲಾ ಎಂಬ ಮಹಿಳೆ ಇಂದು ಪೊಲೀಸರಿಗೆ ಶರಣಾದರು. ಮಾವೋವಾದಿ ಸಿದ್ಧಾಂತಗಳಿಂದ ಅಸಮಾಧಾನಗೊಂಡಿರುವ ಇವರು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಪೂರ್ವ ಗೋದಾವರಿ ಜಿಲ್ಲಾ ಎಸ್ಪಿ ಎಂ.ರವಿಂದ್ರನಾಥ್ ಅವರ ಮುಂದೆ ಸುಶೀಲಾ ಶರಣಾದರು. ಬುಡಕಟ್ಟು ಪ್ರದೇಶದಲ್ಲಿ ನಡೆಯುತ್ತಿದ್ದ ಮಾವೋವಾದಿಗಳ ಚಟುವಟಿಕೆಯಿಂದ ನೊಂದು ಜನಸಾಮಾನ್ಯರಂತೆ ಜೀವನ ನಡೆಸಲು ತೀರ್ಮಾನಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ಮಂಡಲದ ಅಲ್ಲಿವಾಗು ಗ್ರಾಮದ ನಿವಾಸಿ ಸುಶೀಲಾ (20) 2019ರಲ್ಲಿ ಮಾವೋವಾದಿಗಳ ತಂಡ ಸೇರಿಕೊಂಡಿದ್ದರು. ಈ ವೇಳೆ ಶಬರಿ ಪ್ರದೇಶದ ಕಮಾಂಡರ್ ಗೀತಾ ಎಂಬಾಕೆ ಆಯೋಜಿಸಿದ್ದ ಸಭೆಯಿಂದ ಆಕರ್ಷಿತರಾಗಿದ್ದರು. ಮೂರು ದಿನಗಳ ಕಾಲ ತರಬೇತಿ ಪಡೆದುಕೊಂಡಿದ್ದ ಈಕೆ ನಂತರ ಮಾವೋವಾದಿಗಳ ತಂಡದ ಸದಸ್ಯೆಯಾದರು.
ಮಾವೋ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡಿರುವ ಸುಶೀಲಾ, ಸಿಂಗಲ್ ಬ್ಯಾರೆಲ್ ಬ್ರೀಚ್ ಲೋಡಿಂಗ್ ಗನ್ ಬಳಕೆ ಮಾಡುವ ತರಬೇತಿ ಪಡೆದುಕೊಂಡಿದ್ದರು.