ಲಖನೌ: ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಮಳೆಯ ಜೊತೆ ಮಿಂಚು-ಗುಡುಗು ಅಬ್ಬರಿಸಿದ್ದು, ಈಗಾಗಲೇ ಸುಮಾರು 41 ಜನರು ಸಾವನ್ನಪ್ಪಿದ್ದಾರೆ. ಕಾನ್ಪುರದಲ್ಲಿ 18, ಪ್ರಯಾಗರಾಜ್‌ನಲ್ಲಿ 13, ಕೌಶಂಬಿಯಲ್ಲಿ 4, ಪ್ರತಾಪ್‌ಗಢದಲ್ಲಿ 1, ಆಗ್ರಾದಲ್ಲಿ 3, ವಾರಣಾಸಿ ಮತ್ತು ರಾಯ್ ಬರೇಲಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಸುಟ್ಟು ಕರಕಲಾಗಿದ್ದಾರೆ.
ಕಾನ್ಪುರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ. ಇಲ್ಲಿನ ಗ್ರಾಮಾಂತರ ಪ್ರದೇಶದ ಭೋಗ್ನಿಪುರ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಐದು ಜನರು, ಘಟಂಪೂರ್ನಲ್ಲಿ ಒಬ್ಬರು, ಫತೇಪುರ್ ಜಿಲ್ಲೆಯಲ್ಲಿ ಏಳು ಮತ್ತು ಹಮೀರ್ಪುರದ ಗ್ರಾಮದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಬಂಡಾ ಕೊತ್ವಾಲಿ ಪ್ರದೇಶದ ಮೋತಿಯಾರಿ ಗ್ರಾಮದಲ್ಲಿ 13 ವರ್ಷದ ಬಾಲಕಿ ಮತ್ತು ಉನ್ನಾವೊದ ಸರಾಯ್ ಬೈದ್ರಾ ಗ್ರಾಮದಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಘಟಂಪುರದಲ್ಲಿ 38 ಜಾನುವಾರುಗಳು ಸಹ ಸಾವನ್ನಪ್ಪಿವೆ.
ಇದನ್ನು ಓದಿ: ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಮಹಿಳೆ: ಬೆಂಗಳೂರಿನಲ್ಲಿ ವೈದ್ಯರಿಂದ ಯಶಸ್ವಿ ಹೃದಯ ಕಸಿ
ಸಿಎಂ ಸಂತಾಪ: ಚಿತ್ರಕೂಟ್, ಉನ್ನಾವೊ, ಪ್ರಯಾಗರಾಜ್, ಫಿರೋಜಾಬಾದ್, ಕೌಶಂಬಿ, ಕಾನ್ಪುರ ನಗರ, ಕಾನ್ಪುರ ದೇಹತ್‌ನಲ್ಲಿ ಮಿಂಚಿನಿಂದಾಗಿ ಪ್ರಾಣಹಾನಿ ಸಂಭವಿಸಿದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪರಿಹಾರ ಮೊತ್ತವನ್ನು ತಕ್ಷಣವೇ ಮೃತರ ಕುಟುಂಬಗಳಿಗೆ ನಿಯಮಗಳ ಪ್ರಕಾರ ನೀಡಲು ನಿರ್ದೇಶಿಸಿದ್ದಾರೆ. ಅಷ್ಟೇ ಅಲ್ಲದೆ, ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆ ನೀಡುವಂತೆಯೂ ಸೂಚನೆಗಳನ್ನು ನೀಡಿದ್ದಾರೆ.
ರಾಜಸ್ಥಾನದಲ್ಲೂ ಮಾನ್ಸೂನ್ ಮಳೆಯೊಂದಿಗೆ ಗುಡುಗು-ಮಿಂಚಿನ ಅಬ್ಬರ ಹೆಚ್ಚಾಗಿದೆ. ಹಲವೆಡೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇಲ್ಲಿನ ಅಮರ್ ಕೋಟೆಯ ಎದುರಿನ ಬೆಟ್ಟದ ಮೇಲಿರುವ ವಾಚ್ ಟವರ್‌ಗೆ ಆಗಮಿಸಿದ್ದ ಜನರಿಗೆ ಸಿಡಿಲು ಬಡಿದಿದ್ದು ಕೆಲವರು ಮೃತಪಟ್ಟಿದ್ದಾರೆ. ರಾಜಸ್ಥಾನದಾದ್ಯಂತ ಒಟ್ಟು 20 ಜನ ಸಿಡಿಲಿನ ಅಬ್ಬರಕ್ಕೆ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ.