ನಳಂದಾ: ನಿಯಂತ್ರಣ ತಪ್ಪಿದ ಟ್ರಕ್ವೊಂದು ಹೋಟೆಲ್ವೊಂದಕ್ಕೆ ನುಗ್ಗಿ ಎಂಟು ಜನರ ಬಲಿ ಪಡೆದಿರುವ ಘಟನೆ ನಗರದ ತೆಲ್ಹಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ರವಿವಾರ ಸಂಜೆ ಜೆಹನಾಬಾದ್ ಜಿಲ್ಲೆಯಿಂದ ಬರುತ್ತಿದ್ದ ಟ್ರಕ್ ತೆಲ್ಹಾಡಾ ತಾಡ್ ಬಳಿಯ ಹೋಟೆಲ್ವೊಂದಕ್ಕೆ ನುಗ್ಗಿದೆ. ನುಗ್ಗಿದ ರಭಸಕ್ಕೆ ಸ್ಥಳದಲ್ಲೇ ಹೋಟೆಲ್ ಮಾಲೀಕ ಸೇರಿ ಆರು ಜನ ಮೃತಪಟ್ಟಿದ್ದು, ಸುಮಾರು 18 ಜನಕ್ಕೆ ಗಾಯವಾಗಿತ್ತು. ಕೂಡಲೇ ರಕ್ಷಣಾ ಕಾರ್ಯ ಕೈಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಘಟನೆ ನಡೆದ ಬಳಿಕ ಟ್ರಕ್ ಚಾಲಕ ಪರಾರಿಯಾಗಿದ್ದಾನೆ.
ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಆದ್ರೆ ಅಲ್ಲಿಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಒಟ್ಟು ಎಂಟು ಮೃತಪಟ್ಟಿದ್ದು, 16 ಜನ ಗಾಯಗೊಂಡಿದ್ದಾರೆ.
ಪೊಲೀಸರು ಮೃತ ದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸುತ್ತಿರುವಾಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಟ್ರಕ್ಗೆ ಬೆಂಕಿ ಹಚ್ಚಿದ್ದಾರೆ. ಇದಲ್ಲದೆ ಪೊಲೀಸರ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿ, ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಬಿಹಾರ್ ಸಿಎಂ ನಿತೀಶ್ ಕುಮಾರ್ ಆಘಾತಕ್ಕೆ ಒಳಗಾಗಿದ್ದು, ಮೃತ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗೆ ಸಿಎಂ ಸೂಚಿಸಿದ್ದಾರೆ. ಮೃತ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.
ಈ ಘಟನೆ ಕುರಿತು ತೆಲ್ಹಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.