ಮುಂಬೈ(ಮಹಾರಾಷ್ಟ್ರ): ಅಂಬಾನಿ ಮನೆ ಬಳಿ ಪತ್ತೆಯಾದ ಸ್ಫೋಟಕ ತುಂಬಿದ್ದ ಕಾರಿನ ಮಾಲೀಕ ಮನ್ಸುಖ್ ಹಿರೆನ್ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಸುಮಾರು 800 ಸಿಸಿಟಿವಿಗಳ ಮೊರೆ ಹೋಗಿದೆ.
ಪ್ರಕರಣ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಮುಂಬೈನಲ್ಲಿನ 800 ಸಿಸಿಟಿವಿಗಳ ದೃಶ್ಯಾವಳಿ ಆಧರಿಸಿ ಪ್ರಕರಣ ಬೇಧಿಸಲು ಮುಂದಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 40 ಜನರ ಹೇಳಿಕೆ ಪಡೆದುಕೊಂಡಿರುವ ತನಿಖಾ ಸಂಸ್ಥೆ, ಇದರಲ್ಲಿ 8 ಜನರ ಹೇಳಿಕೆ ಪ್ರಮುಖವಾಗಿದೆ ಎಂದು ದಾಖಲು ಮಾಡಿಕೊಂಡಿದೆ.
ಕಳೆದ ಫೆಬ್ರವರಿ 25 ರಂದು ಉದ್ಯಮಿ ಮುಖೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ಕಾರು ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ನಡೆಯತ್ತಿರುವಾಗಲೇ, ಕಾರಿನ ಮಾಲೀಕ ಮನ್ಸುಖ್ ಹಿರೆನ್ ಥಾಣೆ ಬಳಿ ಶವವಾಗಿ ಪತ್ತೆಯಾಗಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಇದಕ್ಕೂ ಒಂದು ವಾರ ಮೊದಲು ಹಿರೆನ್ ತನ್ನ ಕಾರು ಕಳುವಾಗಿರುವ ಬಗ್ಗೆ ಹೇಳಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಚಿನ್ ವಾಜೆಗೆ ಕಸ್ಟಡಿಗೆ ಪಡೆದುಕೊಂಡಿರುವ ಎನ್ಐಎ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.