ಅಹಮದಾಬಾದ್(ಗುಜರಾತ್): ಭಾರತವನ್ನು ಚೀನಾದ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡುವ ಯುವ ಪೀಳಿಗೆಯ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಐಟಿ ದಿಗ್ಗಜ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಅವರು, ಮನಮೋಹನ್ ಸಿಂಗ್ ಅವರು ಯುಪಿಎ ಆಡಳಿತದ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ (IIM-A) ನಲ್ಲಿ ಯುವ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗಿನ ಸಂವಾದದ ವೇಳೆ ಈ ಮಾಹಿತಿ ಹಂಚಿಕೊಂಡ ಅವರು, ಯುವ ಮನಸ್ಸುಗಳು ಭಾರತವನ್ನು ಚೀನಾಕ್ಕೆ ಯೋಗ್ಯ ಪ್ರತಿಸ್ಪರ್ಧಿಯನ್ನಾಗಿ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ನಾನು ಲಂಡನ್‌ನಲ್ಲಿ (2008 ಮತ್ತು 2012 ರ ನಡುವೆ) HSBC ಮಂಡಳಿಯಲ್ಲಿದ್ದೆ. ಮೊದಲ ಕೆಲವು ವರ್ಷಗಳಲ್ಲಿ ಬೋರ್ಡ್‌ರೂಮ್‌ನಲ್ಲಿ ಚೀನಾವನ್ನು ಎರಡರಿಂದ ಮೂರು ಬಾರಿ ಪ್ರಸ್ತಾಪಿಸಿದಾಗ (ಸಭೆಗಳ ಸಮಯದಲ್ಲಿ) ಭಾರತದ ಹೆಸರು ಒಮ್ಮೆ ಮಾತ್ರ ಬರುತ್ತಿತ್ತು ಎಂದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಭಾರತದಲ್ಲಿ ಆರ್ಥಿಕ ಚಟುವಟಿಕೆಗಳು ‘ಸ್ಥಗಿತಗೊಂಡಿದ್ದವು’ ಮತ್ತು ಸಮಯಕ್ಕೆ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಳಂಬವಾಗುತ್ತಿತ್ತು ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.
ಆದರೆ ದುರದೃಷ್ಟವಶಾತ್ ನಂತರ ಏನಾಯಿತು ಎಂದು ನನಗೆ ತಿಳಿದಿಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಸಾಧಾರಣ ವ್ಯಕ್ತಿ ಮತ್ತು ಅವರ ಬಗ್ಗೆ ನನಗೆ ತುಂಬಾ ಗೌರವವಿದೆ ಎಂದರು.
2012 ರಲ್ಲಿ ಎಚ್‌ಎಸ್‌ಬಿಸಿಯನ್ನು ತೊರೆದಾಗ ಸಭೆಗಳಲ್ಲಿ ಭಾರತವನ್ನು ವಿರಳವಾಗಿ ಉಲ್ಲೇಖಿಸಲಾಗಿದೆ. ಆದರೆ ಚೀನಾವನ್ನು ಸುಮಾರು 30 ಬಾರಿ ಹೆಸರಿಸಲಾಯಿತು. ಇಂದು ವಿಶ್ವದಲ್ಲಿ ಭಾರತದ ಬಗ್ಗೆ ಗೌರವದ ಭಾವನೆ ಮೂಡಿದ್ದು, ದೇಶ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಭವಿಷ್ಯದಲ್ಲಿ ನೀವು ಭಾರತವನ್ನು ಯಾವ ಮಟ್ಟದಲ್ಲಿ ನೋಡುತ್ತೀರಿ ಎಂದು ಕೇಳಿದಾಗ, ಜನರು ಬೇರೆ ಯಾವುದೇ ದೇಶದ ಹೆಸರನ್ನು, ವಿಶೇಷವಾಗಿ ಚೀನಾವನ್ನು ಉಲ್ಲೇಖಿಸಿದಾಗ ಭಾರತದ ಹೆಸರನ್ನು ನಮೂದಿಸುವಂತೆ ಮಾಡುವುದು ಯುವ ಪೀಳಿಗೆಯ ಜವಾಬ್ದಾರಿಯಾಗಿದೆ. ಯುವ ಪೀಳಿಗೆಗೆ ಅದು ಸಾಧ್ಯವಾಗುತ್ತದೆ ಎಂಬ ವಿಶ್ವಾಸವನ್ನು ಹೊರಹಾಕಿದರು.
ಚೀನಾದ ಆರ್ಥಿಕತೆಯು ಭಾರತಕ್ಕಿಂತ 6 ಪಟ್ಟು ದೊಡ್ಡದಾಗಿದೆ ಎಂದು ಮೂರ್ತಿ ಹೇಳಿದರು. 1978 ಮತ್ತು 2022 ರ ನಡುವಿನ ಈ 44 ವರ್ಷಗಳಲ್ಲಿ, ಚೀನಾವು ಭಾರತಕ್ಕಿಂತ ಹೆಚ್ಚಿನ ಸಾಧನೆ ಮಾಡಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಇಂದು ಚೀನಾಕ್ಕೆ ಸಿಗುವ ಗೌರವ ಭಾರತಕ್ಕೂ ಸಿಗುತ್ತದೆ ಎಂದು ಯುವ ಜನಾಂಗಕ್ಕೆ ನಾರಾಯಣ ಮೂರ್ತಿ ಕಿವಿಮಾತು ನೀಡಿದರು.
ಓದಿ: ಲಾಭಕ್ಕಾಗಿ ಕೊರೊನಾ ಲಸಿಕೆ ಮಾರದೇ ಪ್ರತಿಯೊಬ್ಬರಿಗೂ ಉಚಿತ ನೀಡಿ: ಇನ್ಫಿ ನಾರಾಯಣ ಮೂರ್ತಿ ಮನವಿ