ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸುವಂತೆ ಒತ್ತಡ ಹಾಕಿದ್ದಕ್ಕೆ ಸಿಬಿಐ ಅಧಿಕಾರಿ ಆತ್ಮಹತ್ಯೆ: ಸಿಸೋಡಿಯಾ - ಈಟಿವಿ ಭಾರತ ಕನ್ನಡ
ನನ್ನ ವಿರುದ್ದ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸುವಂತೆ ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ ಒತ್ತಡ ಹಾಕಿರುವುದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ: ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಅವರಿಗೆ, ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಬಂಧಿಸುವಂತೆ ಒತ್ತಡ ಹಾಕಿದ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿಯ ಉಪ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ, ನನ್ನ ವಿರುದ್ಧ ಅಕ್ರಮ ಹಾಗೂ ನಕಲಿ ಪ್ರಕರಣ ದಾಖಲಿಸಿ ಬಂಧಿಸುವಂತೆ ಸಿಬಿಐನ ಕಾನೂನು ಸಲಹೆಗಾರ ಅಧಿಕಾರಿ ಜಿತೇಂದ್ರ ಕುಮಾರ್ಗೆ ಒತ್ತಡ ಹೇರಿದ್ದಾರೆ. ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.
ನನ್ನ ಮೇಲೆ ದಾಳಿ ಮಾಡಲು ಬಯಸುವಿರಾ, ದಾಳಿ ಮಾಡಿ. ನನ್ನ ವಿರುದ್ಧ ನಕಲಿ ಎಫ್‌ಐಆರ್ ದಾಖಲಿಸಲು ಬಯಸುತ್ತೀರಾ, ಅದನ್ನೂ ಮಾಡಿ. ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನೆಲ್ಲ ಮಾಡಿ. ಆದರೆ, ಈ ರೀತಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡದಿರಿ. ಇಂತಹ ಘಟನೆಗಳಿಂದ ಅವರ ಕುಟುಂಬ ಸದಸ್ಯರಿಗೆ ತುಂಬ ನೋವಾಗುತ್ತದೆ. ಇದರಿಂದ ನನಗೂ ತುಂಬಾ ನೋವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಕೆಲವು ದಿನಗಳಿಂದ ಬಿಜೆಪಿ ಪಕ್ಷ ನನ್ನ ವಿರುದ್ದ ಹಗರಣದ ಆರೋಪವನ್ನು ಮಾಡಿತ್ತು. ಸಿಬಿಐನಿಂದ ತನಿಖೆಯೂ ಆಯಿತು, ನನ್ನ ಮನೆ ಮೇಲೆ ದಾಳಿಯೂ ಮಾಡಲಾಯಿತು. ಆದರೇ ದಾಳಿ ವೇಳೆ ಏನೂ ಸಿಗಲಿಲ್ಲ. ಬಿಜೆಪಿ ನನ್ನ ವಿರುದ್ದ ಸುಳ್ಳು ಆರೋಪ ಮಾಡಿರುವುದು ಜನರೆದುರಿಗೆ ಸಾಬೀತಾಗಿದೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಬಿಐ, ಇಡಿ ಕೇಸ್ ಕ್ಲೋಸ್ ಮಾಡುವ ಆಫರ್ ನೀಡಿತ್ತು ಬಿಜೆಪಿ: ಸಿಸೋಡಿಯಾ ಗಂಭೀರ ಆರೋಪ