ಇಂಫಾಲ (ಮಣಿಪುರ) : ಪಶ್ಚಿಮ ಕಾಂಗ್‌ಪೋಕ್ಪಿ ಪ್ರದೇಶದಲ್ಲಿ ರಾತ್ರಿ ನಡೆದ ಹಿಂಸಾತ್ಮಕ ಘರ್ಷಣೆಯ ಬಳಿಕ ಇಂದು ಓರ್ವ ಪೊಲೀಸ್ ಮೃತಪಟ್ಟಿದ್ದು, ಕನಿಷ್ಠ 10 ಜನ ಗಾಯಗೊಂಡಿದ್ದಾರೆ. ಇಂದು ಮುಂಜಾನೆ 3 ರಿಂದ 6 ಗಂಟೆಯ ತನಕ ಘರ್ಷಣೆ ತಣ್ಣಗಾಗಿದ್ದು, ಬಳಿಕ ಫಯೆಂಗ್ ಮತ್ತು ಸಿಂಗ್ಡಾ ಗ್ರಾಮಗಳಿಂದ ವಿವೇಚನಾರಹಿತ ಗುಂಡಿನ ಸದ್ದು ಕೇಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಕಾಂಗ್‌ಚುಪ್ ಪ್ರದೇಶದ ಹಳ್ಳಿಗಳು ಮತ್ತು ಬೆಟ್ಟಗಳಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಎರಡೂ ಕಡೆಯಿಂದ ಹೆಚ್ಚಿನ ಸಾವು ನೋವು ಸಂಭವಿಸಿರುವ ಸಾಧ್ಯತೆ ಇದ್ದು, ಗುಂಡಿನ ದಾಳಿ ಕೊನೆಗೊಂಡ ನಂತರವೇ ನಿಖರವಾದ ಮಾಹಿತಿ ತಿಳಿದು ಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹಿಂಸಾಚಾರ ಪೀಡಿತ ಮಣಿಪುರಕ್ಕೆ ಅಮಿತ್ ಶಾ ಭೇಟಿ : ಸಿಎಂ ನಿವಾಸದಲ್ಲೇ ಸರ್ವಪಕ್ಷ ಸಭೆ!
ಶುಕ್ರವಾರ (ಜು.7ರಂದು ) ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪೊಲೀಸ್, ಯುವಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ ಘಟನೆ ನಡೆದಿತ್ತು. ಮೇ 3ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ನಂತರ ಕನಿಷ್ಠ 150 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ.
ಮೈಥೇಯಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್ಟಿ) ಸ್ಥಾನಮಾನ ನೀಡಬೇಕು ಎಂದು ಆಗ್ರಹಿಸಿ ನಡೆದ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಬಳಿಕ ಹಿಂಸಾಚಾರ ಭುಗಿಲೆದ್ದಿದೆ. ಮಣಿಪುರದ ಜನಸಂಖ್ಯೆಯ ಶೇಕಡಾ 53 ರಷ್ಟಿರುವ ಮೈಥೇಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ. ಇವರು ಸಹ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಈ ಇಬ್ಬರ ಮಧ್ಯೆ ಕಾದಾಟ ನಡೆಯುತ್ತಿದೆ.
ಇದನ್ನೂ ಓದಿ : ಮಣಿಪುರ ಸಂಘರ್ಷಕ್ಕೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ : ಮಲ್ಲಿಕಾರ್ಜುನ ಖರ್ಗೆ
ಹಿಂಸಾಚಾರವನ್ನು ನಿಯಂತ್ರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಮಣಿಪುರ ಪೊಲೀಸರಲ್ಲದೇ ಸುಮಾರು 40,000 ಕೇಂದ್ರ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಸಂಘರ್ಷ ನಡೆಸುತ್ತಿರುವ ಎರಡೂ ಸಮುದಾಯಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಹಿರಿಯ ಅಧಿಕಾರಿಗಳು ಶ್ರಮಿಸುತ್ತಿದ್ದಾರೆ. ಆದರೂ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಲೇ ಇದೆ. ಹಗಲು, ರಾತ್ರಿಯೆನ್ನದೆ ಗುಂಡಿನ ದಾಳಿ ನಡೆಸಲಾಗುತ್ತಿದೆ.
ಇದನ್ನೂ ಓದಿ : Manipur Violence : ಮಣಿಪುರ ಹಿಂಸಾಚಾರ : ಪೊಲೀಸ್ ಕಮಾಂಡೋ ಸೇರಿ ನಾಲ್ವರ ಹತ್ಯೆ