ಇಂಫಾಲ (ಮಣಿಪುರ) : ಈಶಾನ್ಯ ರಾಜ್ಯದಲ್ಲಿ ಕೆಲವು ವಾರಗಳಿಂದ ಭುಗಿಲೆದ್ದ ಹಿಂಸಾಚಾರದ ಸಂದರ್ಭದಲ್ಲಿ ಭದ್ರತಾ ಪಡೆಗಳು ಮಣಿಪುರದ ವಿವಿಧ ಪ್ರದೇಶಗಳಲ್ಲಿ ನಡೆಸಿದ 'ಪ್ರತೀಕಾರ ಮತ್ತು ರಕ್ಷಣಾತ್ಮಕ' ಕಾರ್ಯಾಚರಣೆಗಳಲ್ಲಿ ಸುಮಾರು 30 ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಭಾನುವಾರ ಮಾಹಿತಿ ನೀಡಿದ್ದಾರೆ.
"ನಾಗರಿಕರ ವಿರುದ್ಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವ ಭಯೋತ್ಪಾದಕ ಗುಂಪುಗಳ ವಿರುದ್ಧ ಪ್ರತೀಕಾರ ಮತ್ತು ರಕ್ಷಣಾತ್ಮಕ ಕಾರ್ಯಾಚರಣೆಗಳಲ್ಲಿ ಸುಮಾರು 30 ಭಯೋತ್ಪಾದಕರು ವಿವಿಧ ಪ್ರದೇಶಗಳಲ್ಲಿ ಹತ್ಯೆಯಾಗಿದ್ದಾರೆ. ಕೆಲವರನ್ನು ಭದ್ರತಾ ಪಡೆಗಳು ಬಂಧಿಸಿವೆ" ಎಂದು ಸಿಂಗ್ ಹೇಳಿದ್ದಾರೆ. ಭಾನುವಾರ ಮಣಿಪುರದಾದ್ಯಂತ ಅರ್ಧ ಡಜನ್‌ಗಿಂತಲೂ ಹೆಚ್ಚು ಸ್ಥಳಗಳಲ್ಲಿ ಸಶಸ್ತ್ರ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ನಡೆದಿವೆ ಎಂದು ಅವರು ತಿಳಿಸಿದ್ದಾರೆ.
ಶಾಂತಿ ಕಾಪಾಡುವ ಸಲುವಾಗಿ ಸೇನೆ ಹಿಂಸಾಚಾರವನ್ನು ತೊಡೆದುಹಾಕುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಘರ್ಷಣೆಗಳು ಪ್ರಾರಂಭವಾಗಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಸಿಂಗ್, ಇತ್ತೀಚಿಗೆ ನಡೆಯುತ್ತಿರುವ ಘರ್ಷಣೆಗಳು ಪ್ರತಿಸ್ಪರ್ಧಿ ಸಮುದಾಯಗಳ ನಡುವೆ ಅಲ್ಲ. ಆದರೆ, ಕುಕಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಎಂದು ಹೇಳಿದ್ದಾರೆ. ಇಂಫಾಲ್ ಪಶ್ಚಿಮದ ಉರಿಪೋಕ್‌ನಲ್ಲಿರುವ ಬಿಜೆಪಿ ಶಾಸಕ ಖ್ವೈರಕ್‌ಪಾಮ್ ರಘುಮಣಿ ಸಿಂಗ್ ಅವರ ಮನೆಯನ್ನು ಧ್ವಂಸಗೊಳಿಸಲಾಗಿದೆ. ಅವರ ಎರಡು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇಂಫಾಲ್ ಕಣಿವೆಯ ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ಹಲವಾರು ಸ್ಥಳಗಳಲ್ಲಿ ಮುಂಜಾನೆ ಘರ್ಷಣೆಗಳು ಪ್ರಾರಂಭವಾದವು ಎಂದು ಅವರು ಹೇಳಿದರು. "ನಮ್ಮ ಮಾಹಿತಿಯ ಪ್ರಕಾರ, ಕಾಕ್ಚಿಂಗ್‌ನ ಸುಗ್ನು, ಚುರಾಚಂದ್‌ಪುರದ ಕಾಂಗ್ವಿ, ಇಂಫಾಲ್ ಪಶ್ಚಿಮದ ಕಾಂಗ್‌ಚುಪ್, ಇಂಫಾಲ್ ಪೂರ್ವದ ಸಗೋಲ್ಮಾಂಗ್, ಬಿಷೆನ್‌ಪುರದ ನುಂಗೋಪೋಕ್ಪಿ, ಇಂಫಾಲ್ ಪಶ್ಚಿಮದ ಖುರ್ಖುಲ್ ಮತ್ತು ಕಾಂಗ್‌ಪೋಕ್ಪಿಯ ವೈಕೆಪಿಐನಲ್ಲಿ ಗುಂಡಿನ ದಾಳಿ ನಡೆದಿದೆ'' ಎಂದು ತಿಳಿಸಿದ್ದಾರೆ.
ಮಹಿಳೆಯರು ವಾಸಿಸುವ ಪ್ರದೇಶಗಳಲ್ಲಿ ಹೊಸ ರಸ್ತೆ ತಡೆಗಳು ಕೂಡ ಕಾಣಿಸಿಕೊಂಡಿವೆ. ಕಾಕ್ಚಿಂಗ್ ಪೊಲೀಸ್ ಠಾಣೆಯಿಂದ ಮೈತೆಯ್ ಗುಂಪಿನಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಲಾಗಿದೆ ಎಂಬ ವರದಿಯೂ ಇದೆ. ಪರಿಶಿಷ್ಟ ಪಂಗಡದ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೈತೈಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಮೇ 3 ರಂದು ಬೆಟ್ಟದ ಜಿಲ್ಲೆಗಳಲ್ಲಿ 'ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ' ಆಯೋಜಿಸಿದ ನಂತರ ಮಣಿಪುರದಲ್ಲಿ ಜನಾಂಗೀಯ ಘರ್ಷಣೆಗಳು ನಡೆದವು. ಇದರಲ್ಲಿ ಸುಮಾರು 75 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದರು.
ಶೇ 40 ರಷ್ಟಿರುವ ನಾಗಾ, ಕುಕಿಗಳು : ಹಿಂಸಾಚಾರಕ್ಕೆ ಮೊದಲು ಕುಕಿ ಗ್ರಾಮಸ್ಥರನ್ನು ಮೀಸಲು ಅರಣ್ಯ ಭೂಮಿಯಿಂದ ಹೊರಹಾಕುವ ವಿಚಾರವಾಗಿ ಉದ್ವಿಗ್ನತೆ ಉಂಟಾಗಿತ್ತು. ಇದು ಸಣ್ಣ ಆಂದೋಲನಗಳ ಸರಣಿಗೆ ಕಾರಣವಾಯಿತು. ಮಣಿಪುರದ ಜನಸಂಖ್ಯೆಯ ಶೇ 53 ರಷ್ಟಿರುವ ಮೈತೈಯಿಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇ 40 ರಷ್ಟಿದ್ದಾರೆ. ಇವರು ಬೆಟ್ಟದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಭಾರತೀಯ ಸೇನೆ ಮತ್ತು ಅಸ್ಸಾಂ ರೈಫಲ್ಸ್‌ನ ಸುಮಾರು 140 ಬೆಟಾಲಿಯನ್, 10,000 ಕ್ಕೂ ಹೆಚ್ಚು ಸಿಬ್ಬಂದಿ ಹಿಂಸಾಪೀಡಿತ ಪ್ರದೇಶಗಳಲ್ಲಿ ನಿಯೋಜನೆಗೊಳಿಸಲಾಗಿದೆ. ಇದಲ್ಲದೇ ಇತರೆ ಅರೆಸೇನಾ ಪಡೆಗಳ ಜೊತೆಗೆ ಈಶಾನ್ಯ ರಾಜ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸಲಾಗುತ್ತಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಸಶಸ್ತ್ರ ಬಂಡುಕೋರರ ಪತ್ತೆಗೆ ಭದ್ರತಾ ಪಡೆಗಳ ಕೂಂಬಿಂಗ್ ಶುರು