ನವದೆಹಲಿ: ಈಶಾನ್ಯ ರಾಜ್ಯ ಮಣಿಪುರ ಎರಡು ತಿಂಗಳಿಂದ ನಿರಂತರವಾಗಿ ಹಿಂಸಾಚಾರ ಪೀಡಿತವಾಗಿದೆ. ಈ ನಡುವೆ ಇಬ್ಬರು ಮಹಿಳೆಯರನ್ನು ನಗ್ನ ಮೆರವಣಿಗೆ ಮಾಡಿದ ಘಟನೆ ಬೆಳಕಿಗೆ ಬಂದು ದೇಶವನ್ನೇ ಬೆಚ್ಚಿಬೀಳಿಸುವಂತೆ ಮಾಡಿದೆ. ಇದರ ಬೆನ್ನಲ್ಲೇ ದೇಶದ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಸಜೀವವಾಗಿ ದಹನ ಮಾಡಿರುವ ಘಟನೆ ವರದಿಯಾಗಿದೆ.
ಮಣಿಪುರ ರಾಜ್ಯಾದ್ಯಂತ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ಮಧ್ಯೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಮೇ 4ರಂದು ಕಾಂಗ್‌ಪೊಕ್ಸಿ ಜಿಲ್ಲೆಯ ಫೈನೋಮ್ ಗ್ರಾಮದಲ್ಲಿ ಈ ಆಘಾತಕಾರಿ ಮತ್ತು ಭಯಾನಕ ಘಟನೆಯ ನಡೆದಿತ್ತು. ಈ ವಿಡಿಯೋ ಬೆಳಕಿಗೆ ಬಂದ ಮತ್ತಷ್ಟು ಆಕ್ರೋಶದ ಜ್ವಾಲೆಯನ್ನೂ ಹೆಚ್ಚಿಸಿದೆ.
ಗುಂಪೊಂದು ಮಹಿಳೆಯರ ನಗ್ನ ಮೆರವಣಿಗೆ ಮಾಡಿ ಹಲ್ಲೆ ನಡೆಸಿರುವ ದೃಶ್ಯಗಳು ಬೆಚ್ಚಿಬೀಳಿಸುವಂತಿವೆ. ಈ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಬಗ್ಗೆ ದೇಶಾದ್ಯಂತ ವ್ಯಾಪಕ ಖಂಡನೆಗೆ ವ್ಯಕ್ತವಾಗಿದೆ. ಈ ಭಯಾನಕ ಘಟನೆಯನ್ನು ಮರೆಯುವ ಈಗ ಮತ್ತೊಂದು ದಾರುಣ ಬೆಳಕಿಗೆ ಬಂದಿದೆ. ಕಾಕ್ಚಿಂಗ್ ಜಿಲ್ಲೆಯ ಸೆರೋ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯನ್ನು ಸಶಸ್ತ್ರ ಗುಂಪೊಂದು ಸಜೀವ ದಹನ ಮಾಡಿರುವುದು ಬಯಲಾಗಿದೆ. ಮೇ 28ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಭಾರಿ ಕಟ್ಟೆಚ್ಚರ: ಈವರೆಗೆ 6 ಸಾವಿರ ಕೇಸ್, 140 ಕ್ಕೂ ಅಧಿಕ ಸಾವು
ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಎಸ್.ಚುರಚಂದ್ ಸಿಂಗ್ ಅವರ ಪತ್ನಿಯೇ ಮೃತರು ಎಂದು ಗುರುತಿಸಲಾಗಿದೆ. ಆದರೆ, ಈ ಕ್ರೂರ ದಾಳಿ ಘಟನೆಯ ಹಿಂದಿನ ನಿಖರವಾದ ಉದ್ದೇಶ ಸ್ಪಷ್ಟವಾಗಿ ಗೊತ್ತಾಗಿಲ್ಲ. ಸದ್ಯ ಈ ಭಯೋತ್ಪಾದಕ ಕೃತ್ಯಕ್ಕೆ ಕಾರಣವಾದ ಅಪರಾಧಿಗಳನ್ನು ಬಂಧಿಸಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಸ್ವಾತಂತ್ರ್ಯ ಹೋರಾಟಗಾರನ ಪತ್ನಿ ಕೊಂದಿರುವ ಘಟನೆಯು ಜನ ಸಮುದಾಯದಲ್ಲಿ ಇನ್ನಷ್ಟು ಆಕ್ರೋಶವನ್ನು ಹುಟ್ಟುಹಾಕಿದೆ. ಜೊತೆಗೆ ದೇಶಾದ್ಯಂತ ವಿವಿಧ ವಲಯಗಳಿಂದ ವ್ಯಾಪಕ ಖಂಡನೆಗೆ ಗುರಿಯಾಗಿದೆ.
ರಾಜ್ಯದಲ್ಲಿ ಪರಿಶಿಷ್ಟ ಪಂಡಗದ ಮೀಸಲಾತಿ ವಿಷಯವಾಗಿ ಬುಡಕಟ್ಟು ಸಮುದಾಯದ ಕುಕಿಗಳು ಹಾಗೂ ಮೈತೇಯಿ ಸಮುದಾಯದ ನಡುವೆ ಮಣಿಪುರ ರಾಜ್ಯಾದ್ಯಂತ ಮೇ 3ರಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಇದರಲ್ಲಿ ಇದುವರೆಗೆ160ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದು, ಅನೇಕರು ರಾಜ್ಯದಿಂದ ಬೇರೆಡೆ ಸ್ಥಳಾಂತರವಾಗಿ ಆಶ್ರಯ ಪಡೆದಿದ್ದಾರೆ. ಶಾಂತಿ ಸ್ಥಾಪನೆಗೆ ಸಾಕಷ್ಟು ಪಯತ್ನ ಪಟ್ಟರೂ ಹಿಂಸಾಚಾರ ನಿಲ್ಲುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಪ್ರತಿಪಕ್ಷಗಳು ಆಕ್ರೋಶಗೊಂಡಿದ್ದು, ಸಂಸತ್ತಿನಲ್ಲಿ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಪಟ್ಟು ಹಿಡಿಯಲಾಗಿದೆ.
ಇದನ್ನೂ ಓದಿ: ಮಣಿಪುರ ಮಹಿಳೆಯರ ಮೇಲೆ ಅಮಾನುಷ ದೌರ್ಜನ್ಯ: ಬಾಲಾಪರಾಧಿ ಸೇರಿ 6 ಮಂದಿ ಸೆರೆ, ವಲಸೆ ಹೋಗದಂತೆ ಸರ್ಕಾರದ ಮನವಿ