ಚೆನ್ನೈ (ತಮಿಳುನಾಡು): ಮಾಂಡೌಸ್ ಚಂಡಮಾರುತ ತಮಿಳುನಾಡಿನಲ್ಲಿ ಅನಾಹುತ ಸೃಷ್ಟಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಸುಮಾರು 400 ಮರಗಳು ಉರುಳಿ ಬಿದ್ದಿವೆ. ಒಂಭತ್ತು ಸಾವಿರಕ್ಕೂ ಹೆಚ್ಚು ಜನರು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಇದೇ ವೇಳೆ ಚಂಡಮಾರುತ ಕ್ರಮೇಣವಾಗಿ ದುರ್ಬಲಗೊಂಡಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯಭಾರ ಕುಸಿತದಿಂದ ಉಂಟಾಗಿರುವ ಚಂಡಮಾರುತವು ಚೆನ್ನೈ ಸಮೀಪದ ಮಾಮಲ್ಲಪುರಂನಲ್ಲಿ ಕರಾವಳಿಯನ್ನು ದಾಟಿದ ದುರ್ಬಲಗೊಂಡಿದೆ. ಆದರೆ, ಹವಾಮಾನ ವೈಪರೀತ್ಯಯು ಚೆನ್ನೈ ಸೇರಿದಂತೆ ಅನೇಕ ಕಡೆ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ:ತಮಿಳುನಾಡನ್ನು ತಲ್ಲಣಗೊಳಿದ ಮ್ಯಾಂಡೌಸ್ ಚಂಡಮಾರುತ: ತಗ್ಗು ಪ್ರದೇಶಗಳು ಜಲಾವೃತ, ಧರೆಗುರುಳಿದ ಮರಗಳು
ಡಿಸೆಂಬರ್ 9 ಮತ್ತು 10ರಂದು ಚಂಡಮಾರುತದಿಂದ 70 ಕಿಮೀ ವೇಗದಲ್ಲಿ ಬೀಸಿದ ಗಾಳಿಯ ರಭಸಕ್ಕೆ ಚೆನ್ನೈ ನಗರದಲ್ಲಿ ಸುಮಾರು 400 ಮರಗಳು ಬಿದ್ದಿವೆ. ಇದೇ ವೇಳೆ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ.
ಕಾಸಿಮೇಡು ಪ್ರದೇಶದಲ್ಲಿ ಚಂಡಮಾರುತದ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್, ಮುನ್ನೆಚ್ಚರಿಕೆ ಕ್ರಮ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ದೊಡ್ಡ ಹಾನಿಯನ್ನು ತಡೆಯಲು ಸಾಧ್ಯವಾಗುತ್ತಿದೆ. ಸುಧಾರಿತ ಕ್ರಮಗಳಿಂದ ಸರ್ಕಾರ ಯಾವುದೇ ದುರಂತವನ್ನು ಸೂಕ್ತವಾಗಿ ನಿರ್ವಹಿಸಬಹುದು ಎಂದು ತೋರಿಸಿದೆ ಎಂದರು.
ಇದನ್ನೂ ಓದಿ: ತಮಿಳುನಾಡು ಕರಾವಳಿಗೆ ಅಪ್ಪಳಿಸಿದ ಚಂಡಮಾರುತ.. ಮಾಮಲ್ಲಪುರಂನಲ್ಲಿ ಭೂಕುಸಿತ
ಈಗಾಗಲೇ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸೇರಿದಂತೆ ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ತೊಡಗಿದೆ. ಹಲವು ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿದ್ದರೂ ತೆರವು ಕಾರ್ಯ ಭರದಿಂದ ಸಾಗಿದೆ. ವಿದ್ಯುತ್ ಕಂಬಗಳು ಮತ್ತು ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯುಂಟಾಗಿದ್ದು, 600 ಸ್ಥಳಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, 300 ಸ್ಥಳಗಳಲ್ಲಿ ಅದನ್ನು ಸರಿಯಾಗಿ ಹೊಂದಿಸಲಾಗಿದೆ ಎಂದು ಹೇಳಿದರು.
ಸುಮಾರು 25 ಸಾವಿರ ಪೌರಕಾರ್ಮಿಕರು ವಿವಿಧ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಚೆನ್ನೈನ ನಗರದ 22 ಸುರಂಗ ಮಾರ್ಗಗಳಲ್ಲಿ ನೀರು ನಿಲ್ಲದೇ ವಾಹನ ಸಂಚಾರ ಸುಗಮವಾಗಿ ಸಾಗುತ್ತಿದೆ. ಜೊತೆಗೆ ನೆರೆಯ ಜಿಲ್ಲೆಗಳಾದ ಚೆಂಗಲ್‌ಪೇಟ್, ಕಾಂಚೀಪುರಂ ಮತ್ತು ವಿಲ್ಲುಪುರಂನಲ್ಲೂ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಮ್ಯಾಂಡೌಸ್ ಚಂಡಮಾರುತ: ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಬಾಗಲಕೋಟೆಯಲ್ಲಿ ಅತೀ ಕನಿಷ್ಠ ಉಷ್ಣಾಂಶ ದಾಖಲು
ಚಂಡಮಾರುತದಿಂದ ಉಂಟಾದ ನಷ್ಟದ ಅಂದಾಜು ಮಾಡಲಾಗುತ್ತಿದ್ದು, ಅಗತ್ಯವಿದ್ದರೆ ಕೇಂದ್ರದ ನೆರವು ಪಡೆಯಲಾಗುವುದು ಎಂದು ಸಿಎಂ ಸ್ಟಾಲಿನ್ ತಿಳಿಸಿದರು. ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ರಾಮಚಂದ್ರನ್, 205 ಪರಿಹಾರ ಕೇಂದ್ರಗಳಲ್ಲಿ 9,000ಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
ಚಂಡಮಾರುತದಿಂದಾಗಿ ಶುಕ್ರವಾರ ಬೆಳಗ್ಗೆ 6ರಿಂದ ವಿಮಾನ ಹಾರಾಟದ ಮೇಲೂ ಪರಿಣಾಮ ಬೀರಿದೆ. ಇದರಿಂದ ಚೆನ್ನೈ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಕಳೆದ 24 ಗಂಟೆಯಲ್ಲಿ 30 ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಇದನ್ನೂ ಓದಿ: ಮ್ಯಾಂಡೌಸ್ ಚಂಡಮಾರುತದ ಎಫೆಕ್ಟ್: ದಕ್ಷಿಣ ಒಳನಾಡಿನ 5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್