ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪ ಹೊತ್ತಿರುವ ಆರೋಪಿ ಶಂಕರ್ ಮಿಶ್ರಾ ಅವರು ಶುಕ್ರವಾರ ದೆಹಲಿ ನ್ಯಾಯಾಲಯದಲ್ಲಿ ತಮ್ಮ ಮೇಲಿನ ಆರೋಪ ತಳ್ಳಿಹಾಕಿದ್ದಾರೆ.
ಕಳೆದ ವರ್ಷ ನವೆಂಬರ್ 26 ರಂದು ಏರ್ ಇಂಡಿಯಾ ನ್ಯೂಯಾರ್ಕ್ ನವದೆಹಲಿ ವಿಮಾನದಲ್ಲಿ ಸಹ ಪ್ರಯಾಣಿಕರ ಮೇಲೆ ಶಂಕರ್ ಮಿಶ್ರಾ ಅವರು ಮೂತ್ರ ವಿಸರ್ಜನೆ ಮಾಡಿದ್ದ ಆರೋಪ ಹೋರಿಸಲಾಗಿತ್ತು. ಈ ಆರೋಪದ ಬಗ್ಗೆ ನ್ಯಾಯಾಲಯದಲ್ಲಿ ಹೇಳಿಕೆ ನೀಡಿರುವ ಶಂಕರ್ ಮಿಶ್ರಾ, 'ನಾನು ಆರೋಪಿ ಅಲ್ಲ. ಬೇರೆ ಯಾರೋ ಇರಬೇಕು. ಅವರೇ ಮೂತ್ರ ವಿಸರ್ಜನೆ ಮಾಡಿಕೊಂಡಿರಬಹುದು. ಮಹಿಳೆ ಯಾವುದೋ ಪ್ರಾಸ್ಟೇಟ್ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರಬಹುದು. ಅವರ ಆಸನದ ಬಳಿಗೆ ಬೇರೆ ಯಾರೂ ಹೋಗದಂತಿತ್ತು' ಎಂದು ಹೇಳಿಕೆ ನೀಡಿದ್ದಾರೆ.
'ಅವರ ಆಸನವನ್ನು ಹಿಂದಿನಿಂದ ಮಾತ್ರ ಸಂಪರ್ಕಿಸಬಹುದಿತ್ತು ಮತ್ತು ಯಾವುದೇ ಸಂದರ್ಭದಲ್ಲಿ ಮೂತ್ರವು ಸೀಟಿನ ಮುಂಭಾಗದ ಪ್ರದೇಶಕ್ಕೆ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೇ ವೃದ್ಧೆಯ ಹಿಂದೆ ಕುಳಿತ್ತಿದ್ದ ಯಾವುದೇ ಪ್ರಯಾಣಿಕರು ಇಂತಹ ಯಾವುದೇ ಆರೋಪವನ್ನು ಮಾಡಿಲ್ಲ' ಎಂದು ಆರೋಪಿ ಶಂಕರ್ ಮಿಶ್ರಾ ಅವರ ಪರ ವಕೀಲರು ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಮಿಶ್ರಾ ಪರ ವಕೀಲರ ವಾದ ಆಲಿಸಿದ ಬಳಿಕ ಮಧ್ಯಪ್ರವೇಶಿಸಿದ ಸೆಷನ್ಸ್ ನ್ಯಾಯಾಧೀಶ ಹರ್ಜ್ಯೋತ್ ಸಿಂಗ್ ಭಲ್ಲಾ "ವಿಮಾನದ ಒಂದು ಬದಿಯಿಂದ ಇನ್ನೊಂದು ಬದಿಗೆ ಹೋಗುವುದು ಅಸಾಧ್ಯದ ಕೆಲಸವೇನಲ್ಲ, ನಾನು ಹಲವು ಬಾರಿ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದೇನೆ. ಯಾವುದೇ ಕಡೆಯಿಂದ ಇನ್ನೊಂದು ಕಡೆಗೆ ಸರಾಗವಾಗಿ ಹೋಗಬಹುದು,ಯಾವುದೇ ಆಸನಕ್ಕೂ ತಲುಪಬಹುದು’’ ಎಂದರು
ಇನ್ನು ಅಗತ್ಯವಿದ್ದಲ್ಲಿ ಹೊಸ ಕಾರಣಗಳೊಂದಿಗೆ ಪೊಲೀಸ್ ಕಸ್ಟಡಿ ಪಡೆಯಲು ಮ್ಯಾಜಿಸ್ಟ್ರೇಟ್ ನ್ಯಾಯಾಲಯವನ್ನು ಪುನಃ ಸಂಪರ್ಕಿಸಲು ಸೆಷನ್ಸ್ ನ್ಯಾಯಾಲಯವು ದೆಹಲಿ ಪೊಲೀಸರಿಗೆ ಸ್ವಾತಂತ್ರ್ಯವನ್ನೂ ನೀಡಿತು. ಇನ್ನು ಇದಕ್ಕೂ ಮುನ್ನ ಜನವರಿ 7 ರಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಮಿಶ್ರಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಮತ್ತೊಂದೆಡೆ ಬುಧವಾರ ಪಟಿಯಾಲ ಹೌಸ್ ಕೋರ್ಟ್ ಶಂಕರ್ ಮಿಶ್ರಾ ಸಲ್ಲಿಸಿದ್ದ ಜಾಮೀನು ಅರ್ಜಿಯ ಆದೇಶವನ್ನು ಕಾಯ್ದಿರಿಸಿತ್ತು.
ಈ ನಡುವೆ ದೆಹಲಿ ಪೊಲೀಸರು ಶಂಕರ್ ಮಿಶ್ರಾ ಅವರ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಇತ್ತ ದೆಹಲಿ ಪೊಲೀಸರ ಪರ ಕೋರ್ಟ್ಗೆ ಹಾಜರಾಗಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್, ದೂರುದಾರರ 164 ಹೇಳಿಕೆಗಳನ್ನು ಕೋರ್ಟ್ಗೆ ಸಲ್ಲಿಸಿದರು. ಇನ್ನು ಪ್ರಕರಣದ ಆರೋಪಿ ಶಂಕರ್ ಮಿಶ್ರಾ ಅವರನ್ನು ದೆಹಲಿ ಪೊಲೀಸರು ಜನವರಿ 6, 2023 ರಂದು ಬೆಂಗಳೂರಿನಲ್ಲಿ ಬಂಧಿಸಿದ್ದರು.
ಮಹಿಳೆ ಸಲ್ಲಿಸಿದ ದೂರಿನಲ್ಲೇನಿದೆ?: ವಿಮಾನದ ಬಿಸಿನೆಸ್ ಕ್ಲಾಸ್‌ನ ಮೊದಲ ಸಾಲಿನಲ್ಲಿ ನಾನು 8 ಎ (ಕಿಟಕಿ) ಸೀಟಿನಲ್ಲಿ ಕುಳಿತಿದ್ದೆ. ಆರೋಪಿ ಶಂಕರ್ ಮಿಶ್ರಾ ಪಕ್ಕದ 8 ಸಿ ಸೀಟಿನಲ್ಲಿ ಕುಳಿತಿದ್ದ. ನನ್ನ ಪಕ್ಕದಲ್ಲಿದ್ದ ಆರೋಪಿ ಮಿಶ್ರಾ ಮಧ್ಯಾಹ್ನದ ಊಟದ ಸಮಯದಲ್ಲಿ ನಾಲ್ಕು ಗ್ಲಾಸ್ ಸಿಂಗಲ್ ಮಾಲ್ಟ್ ವಿಸ್ಕಿಯನ್ನು ಹೊಟ್ಟೆಗಿಳಿಸಿದ್ದ. ಇದರಿಂದ ಆದಾಗಲೇ ತುಂಬಾ ಆತನಿಗೆ ಅಮಲೇರಿತ್ತು. ಹೀಗಾಗಿ ನಾನು ಮಿಶ್ರಾಗೆ ಹೆಚ್ಚಿನ ಮದ್ಯವನ್ನು ನೀಡುವುದನ್ನು ನಿಲ್ಲಿಸುವಂತೆ ವಿಮಾನ ಸಿಬ್ಬಂದಿಯನ್ನು ಕೇಳಿಕೊಂಡಿದ್ದೆ ಎಂದು ಸುಗತ ಭಟ್ಟಾಚಾರ್ಯ ತಮ್ಮ ದೂರಿನಲ್ಲಿ ಹೇಳಿದ್ದರು.
ಓದಿ: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!