ಪ್ರತಾಪ್‌ಗಢ (ಯುಪಿ): ಪ್ರತಾಪಗಢ ಜಿಲ್ಲೆಯ ರೈಲು ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯದಲ್ಲಿ ಶನಿವಾರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕೊತ್ವಾಲಿ ಪ್ರದೇಶದ ನಿವಾಸಿ ಅಣ್ಣಾ ಅಲಿಯಾಸ್ ಶುಭಂ ಮೊದ್ವಾಲ್ ಎಂದು ಗುರುತಿಸಲಾಗಿದ್ದು, ಆರೋಪಿ ಶೌಚಾಲಯದ ಉಸ್ತುವಾರಿ ನೋಡಿಕೊಳ್ಳುವವನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಕೂಡಲೇ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಕೊತ್ವಾಲಿ ಪೊಲೀಸರು ಮತ್ತು ಅಪರಾಧ ವಿಭಾಗದ ಜಂಟಿ ತಂಡವು ಭೂಪಿಯಾಮಾವು ಕ್ರಾಸಿಂಗ್ ಬಳಿ ಆರೋಪಿಯನ್ನು ಬಂಧಿಸಿದೆ ಎಂದು ಪ್ರತಾಪಗಢ ನಗರ ವೃತ್ತ ಅಧಿಕಾರಿ ಅಭಯ್ ಪಾಂಡೆ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಅಹಮದಾಬಾದ್ ರೈಲಿಗೆ ಹೋಗಾಬೇಕಾಗಿದ್ದ ಮಹಿಳೆ ತನ್ನ ಪತಿಯೊಂದಿಗೆ ಪ್ರತಾಪ್‌ಗಢ ರೈಲು ನಿಲ್ದಾಣಕ್ಕೆ ಶುಕ್ರವಾರ ರಾತ್ರಿ ಬಂದಿದ್ದರು. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ಆಕೆಯ ಪತಿ ಚಹಾ ಹಾಗೂ ಉಪಾಹಾರ ತರಲು ಹೋದಾಗ ಮಹಿಳೆ ಸಾರ್ವಜನಿಕ ಶೌಚಾಲಯಕ್ಕೆ ಹೋಗಿದ್ದಾರೆ. ಆ ವೇಳೆ, ಆಕೆ ಮೇಲೆ ಈ ಕಾಮುಕ ಅತ್ಯಾಚಾರವೆಸಗಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆ ಎಫ್ಐಆರ್ನಲ್ಲಿ ದಾಖಲಿಸಿದ್ದಾರೆ.
ಮಹಿಳೆ ಮತ್ತು ಆಕೆಯ ಪತಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ನೀಡಿದ್ದಾರೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಕೆಲವೇ ಗಂಟೆಗಳಲ್ಲಿ ಬಂದಿಸಿ ಜೈಲಿಗೆ ಕಳುಹಿಸಿದ್ದಾರೆ.