ನವದೆಹಲಿ: ದೇಶಾದ್ಯಂತ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ 37 ವರ್ಷದ ನಕಲಿ ವೈದ್ಯನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ 8 ವರ್ಷಗಳಿಂದ 11 ವಿವಿಧ ಆಸ್ಪತ್ರೆಗಳು, ಕ್ಲಿನಿಕ್ಗಳು, ನರ್ಸಿಂಗ್ ಹೋಂಗಳಲ್ಲಿ ಕೆಲಸ ಮಾಡಿದ್ದು, ತಿಂಗಳಿಗೆ ಒಂದೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ.
ಇಬ್ಬರ ಜತೆ ಮದುವೆ, ಮೋಸ
27 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮನೀಶ್ ಕೌಲ್ನನ್ನು ಉತ್ತರಪ್ರದೇಶದ ಮೀರತ್ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಯುವತಿಯರನ್ನು ಮದುವೆಯಾಗಿ ವಂಚಿಸಿದ್ದ ಎಂದು ತಿಳಿದುಬಂದಿದೆ.
ಜೈಲಿನಿಂದ ತಪ್ಪಿಸಿಕೊಂಡಿದ್ದ
2019 ರಲ್ಲಿ ಮುಂಬೈನಲ್ಲಿ ದೆಹಲಿ ಪೊಲೀಸರ 3 ನೇ ಬೆಟಾಲಿಯನ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದನಂತೆ. ವರುಣ್ ಕೌಲ್, ವಿಕ್ರಾಂತ್, ಭಗತ್ ಸೇರಿ ತುಂಬಾ ಹೆಸರುಗಳನ್ನಿಟ್ಟುಕೊಂಡಿದ್ದ ಆರೋಪಿ, ದೆಹಲಿ, ಮುಂಬೈ, ಪಂಚಕುಲ, ಬೆಂಗಳೂರು, ಗೋವಾ, ಕೇರಳ, ಅಂಬಾಲಾ ಸೇರಿ ಹಲವಾರು ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾನೆ. ಹಾಗಾಗಿ ಬಹುತೇಕ ನಗರಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಿದ್ದೇ ರೋಚಕ
ಪೊಲೀಸರು ಎಷ್ಟೇ ಪ್ರಯತ್ನಿಸಿದ್ರೂ, ಕೌಲ್ ಇರುವ ಜಾಗ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಅವನ ಕಾಲ್ಶೀಟ್ ಪರಿಶೀಲಿಸಿ, ಕೌಲ್ಗೆ ಫುಡ್ ಸಪ್ಲೈ ಮಾಡ್ತಿದ್ದ ಹುಡುಗನ ನಂಬರ್ ಪಡೆದರು. ಆ ಮೂಲಕ ಅವನಿದ್ದ ಸ್ಥಳದ ಬಗ್ಗೆ ಮಾಹಿತಿ ಪಡೆದು ಸುತ್ತ ಪೊಲೀಸ್ ಭದ್ರಕೋಟೆ ನಿರ್ಮಿಸಿದ್ರು. ಮೀರತ್ ಶಾಸ್ತ್ರಿ ನಗರದ ನರ್ಸಿಂಗ್ ಹೋಂನಲ್ಲಿ ಪೊಲೀಸರು ಆರೋಪಿಯನ್ನು ಖೆಡ್ಡಾಗೆ ಕೆಡವಿದರು.
ಕೌಲ್ ತಂದೆ ಔಷಧಿ ಫ್ಯಾಕ್ಟರಿ ನಡೆಸ್ತಿದ್ರಂತೆ
ತನ್ನ ತಂದೆ ಬ್ರಿಜ್ ಭೂಷಣ್ ಕೌಲ್ ಅಂಬಾಲಾ ಕ್ಯಾಂಟ್ ಪ್ರದೇಶದಲ್ಲಿ ಔಷಧಿ ಕಾರ್ಖಾನೆ ನಡೆಸುತ್ತಿದ್ದನೆಂದು ಆರೋಪಿ ಬಾಯ್ಬಿಟ್ಟಿದ್ದಾನೆ. ಅಂಬಾಲಾ ಕ್ಯಾಂಟ್ನಲ್ಲಿ ಶಾಲಾ ಶಿಕ್ಷಣ ಪೂರೈಸಿರುವ ಇವನು, 2006 ರಲ್ಲಿ ಯುನಾನಿ ಮತ್ತು ಹೋಮಿಯೋಪತಿ ಬ್ಯಾಚುಲರ್ನಲ್ಲಿ ಪ್ರವೇಶ ಪಡೆದನು. ಆದರೆ, ಅಧ್ಯಯನ ಪೂರ್ಣಗೊಳಿಸಿಲ್ಲ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶಿಬೇಶ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ:ಕೊರೊನಾ ನಿಯಮ ಉಲ್ಲಂಘನೆ : ಪಶ್ಚಿಮ ವಿಭಾಗ ಪೊಲೀಸರಿಂದ ₹4 ಕೋಟಿ ದಂಡ ಸಂಗ್ರಹ