ಹೈದರಾಬಾದ್: ಅಪರಿಚಿತ ವ್ಯಕ್ತಿಯೊಬ್ಬ ಅಸ್ಸೋ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರ ಭಾಷಣವನ್ನು ನಿಲ್ಲಿಸಲು ಯತ್ನಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಟಿಆರ್‌ಎಸ್ ಸ್ಕಾರ್ಫ್ ಧರಿಸಿರುವ ವ್ಯಕ್ತಿ, ರ‍್ಯಾಲಿಯಲ್ಲಿ ಮೈಕ್ ಕಿತ್ತುಕೊಂಡು ಕೆಳಕ್ಕೆ ತಿರುಗಿಸುವಾಗ ಶರ್ಮಾ ಅವರನ್ನು ನೇರವಾಗಿ ನೋಡುತ್ತಿರುವುದು ಕಂಡು ಬಂದಿದೆ.
ಅಪರಿಚಿತ ವ್ಯಕ್ತಿ ಶರ್ಮಾ ಅವರೊಂದಿಗೆ ಸಂಭಾಷಣೆಗೆ ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಹಿಮಂತ್ ಬಿಸ್ವಾ ಶರ್ಮಾ, ಟಿಆರ್‌ಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ಮಾತಿಗೆ ಅಪರಿಚಿತ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅಪರಿಚಿತನ ಮಾತು ಅರ್ಥವಾಗದೇ ಬಿಸ್ವಾ ಶರ್ಮಾ ಮುಗುಳ್ನಕ್ಕಿದ್ದಾರೆ. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ವೇದಿಕೆಯಿಂದ ಅಪರಿಚಿತ ವ್ಯಕ್ತಿಯನ್ನು ಕೆಳಕ್ಕೆ ಇಳಿಸಿದ್ದಾರೆ.
ಗಣೇಶ ನಿಮಜ್ಜನ ಶೋಭಾಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಕಾರಣದಿಂದ ಅಸ್ಸೋಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೈದರಾಬಾದ್‌ಗೆ ಭೇಟಿ ನೀಡಿದ್ದಾರೆ. ಈ ನಡುವೆ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ವಿರುದ್ಧ ಹಿಮಂತ್ ಶರ್ಮಾ ವಾಗ್ದಾಳಿ ನಡೆಸಿದ್ದರು. ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥರು ರಾಜವಂಶದ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹರಿಹಾಯ್ದಿದ್ದರು.
ತೆಲಂಗಾಣ ಸಿಎಂ ಕೆ ಸಿ ಚಂದ್ರಶೇಖರ್ ರಾವ್ ಬಿಜೆಪಿ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಾರೆ. ಆದರೆ, ನಾವು ರಾಜವಂಶ ಮುಕ್ತ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದೇವೆ. ನಾವು ಈಗಲೂ ಹೈದರಾಬಾದ್‌ನಲ್ಲಿ ಅವರ ಮಗ ಮತ್ತು ಮಗಳ ಚಿತ್ರಗಳನ್ನು ನೋಡುತ್ತೇವೆ. ದೇಶದ ರಾಜಕೀಯವು ವಂಶಾಡಳಿತ ರಾಜಕೀಯದಿಂದ ಮುಕ್ತವಾಗಬೇಕು ಎಂದು ಶರ್ಮಾ ಟೀಕಿಸಿದ್ದರು.
ಸುದ್ದಿ ಸಂಸ್ಥೆಯೊಂದಕ್ಕೆ ಮಾತನಾಡಿದ್ದ ಶರ್ಮಾ, ದೇಶದ ಜನರಿಗಾಗಿ ಸರ್ಕಾರ ಇರಬೇಕು, ಆದರೆ ಎಂದಿಗೂ ಒಂದು ಕುಟುಂಬಕ್ಕಾಗಿ ಇರಬಾರದು ಎಂದು ಅವರು ಕೆಸಿಆರ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭಾಗ್ಯನಗರ ಗಣೇಶ ಉತ್ಸವ ಸಮಿತಿಯು ಅಸ್ಸೋಂ ಸಿಎಂಗೆ ಆಹ್ವಾನ ನೀಡಿತ್ತು. ಈ ಆಹ್ವಾನವನ್ನು ಮನ್ನಿಸಿ ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೈದರಾಬಾದ್‌ಗೆ ಭೇಟಿ ನೀಡಿದ್ದಾರೆ.
ಇದನ್ನು ಓದಿ:ರಾಹುಲ್ ಗಾಂಧಿ ಸಾರಥ್ಯದಲ್ಲಿ 3ನೇ ದಿನಕ್ಕೆ ಕಾಲಿಟ್ಟ 'ಭಾರತ್ ಜೋಡೋ ಯಾತ್ರೆ'