ನವದೆಹಲಿ : ಸಹೋದರರಿಬ್ಬರು ಸೇರಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ನವದೆಹಲಿಯ ಆದರ್ಶ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆಜಾದ್‌ಪುರ ಗ್ರಾಮದಲ್ಲಿ ನಡೆದಿದೆ. ಆದರೆ, ಇಡೀ ಘಟನೆ ನಡೆಯುವಾಗ ಸ್ಥಳೀಯರು ಮೂಕ ಪ್ರೇಕ್ಷಕರಂತೆ ನಿಂತುಕೊಂಡಿರುವುದು ಸಿಸಿ ಟಿವಿಯೊಂದರಲ್ಲಿ ದೃಶ್ಯ ಸೆರೆಯಾಗಿದೆ. ಯಾರೊಬ್ಬರು ಅಮಾಯಕ ಯುವಕನ ಪ್ರಾಣ ಉಳಿಸಲು ಮುಂದಾಗಿಲ್ಲ.
ಆರೋಪಿಗಳಿಬ್ಬರೂ ಯುವಕ ಸಾಯುವವರೆಗೂ ತಲೆಗೆ ದೊಡ್ಡ ಇಟ್ಟಿಗೆ ಮತ್ತು ಕಲ್ಲುಗಳಿಂದ ಹೊಡೆಯುತ್ತಲೇ ಇದ್ದರು. ನರೇಂದ್ರ (28) ಎಂಬಾ ಮೃತ ಯುವಕ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಈ ಮೂವರು ಆದರ್ಶನಗರ ನಿವಾಸಿಗಳು ಎನ್ನಲಾಗಿದೆ. ಆರೋಪಿ ರಾಹುಲ್ ಕಲಿ ಎಂಬಾತನ ಬಳಿ ಡ್ರಗ್ಸ್ಗಾಗಿ ಮೃತ ನರೇಂದ್ರ ಪದೇಪದೆ ಹಣ ಕೇಳುತ್ತಿದ್ದನಂತೆ. ರಾಹುಲ್ ಕಲಿ ಕೋಪಗೊಂಡು ಆಜಾದ್‌ಪುರ ಗ್ರಾಮದ ದೇವಸ್ಥಾನದ ಬಳಿ ಬರುವಂತೆ ನರೇಂದ್ರನನ್ನು ಕರೆದಿದ್ದಾನೆ. ರಾಹುಲ್ ಕಲಿ ತನ್ನ ಸಹೋದರ ರೋಹಿತ್ ಕಲಿಯೊಂದಿಗೆ ದೇವಸ್ಥಾನ ತಲುಪಿದ್ದಾನೆ. ಅಲ್ಲಿಗೆ ನರೇಂದ್ರ ಬರುತ್ತಿದ್ದಂತೆ ಸಹೋದರರಿಬ್ಬರೂ ಸೇರಿ ಆತನನ್ನು ಥಳಿಸಿದ್ದಾರೆ.
ಇದನ್ನೂ ಓದಿ: ಅನಧಿಕೃತ ಕೇಬಲ್ ವಿರುದ್ಧ ಸಮರ ಸಾರಿದ ಬೆಸ್ಕಾಂ: ನಿರ್ದಾಕ್ಷಿಣ್ಯ ತೆರವು ಕಾರ್ಯಾಚರಣೆ
ಮೊದಲಿಗೆ ಬ್ಲೇಡ್ನಿಂದ ಹಲ್ಲೆ ಮಾಡಿ ನಂತರ ಇಟ್ಟಿಗೆ, ಕಲ್ಲುಗಳಿಂದ ಹೊಡೆದು ಸಾಯಿಸಿ ಅಲ್ಲಿಂದ ಆರೋಪಿಗಳಿಬ್ಬರೂ ಪರಾರಿಯಾಗಿದ್ದಾರೆ. ಈ ಕುರಿತು ತನಿಖೆ ನಡೆಸುತ್ತಿರುವ ಆದರ್ಶ್‌ನಗರ ಪೊಲೀಸರು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಆರೋಪಿಗಳು ಅಪರಾಧ ಕೃತ್ಯ ನಡೆಸಿದ್ದು ಸ್ಪಷ್ಟವಾಗಿ ಕಂಡಿದೆ. ಆರೋಪಿ ರಾಹುಲ್ ಕಲಿಯನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸಹೋದರ ರೋಹಿತ್ ಕಲಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.