ನವದೆಹಲಿ: ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಚಿತ್ರಪ್ರದರ್ಶನದ ವೇಳೆ ಟಿಕೆಟ್ ಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಮತ್ತೊಬ್ಬ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿರುವ ಘಟನೆ ದೆಹಲಿಯ ಡಿಲೈಟ್ ಚಿತ್ರಮಂದಿರದ ಬಳಿ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಕುರಿತು ಮಾಹಿತಿ ಪಡೆದ ಚಾಂದಿನಿ ಮಹಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಆತನ ವಿರುದ್ಧ ದರೋಡೆ, ಮಾದಕ ದ್ರವ್ಯ ಹೊಂದಿದ ಆರೋಪ, ಶಸ್ತ್ರಾಸ್ತ್ರ ಕಾಯ್ದೆ ಅಡಿ ಸುಮಾರು 27 ಪ್ರಕರಣಗಳು ಈಗಾಗಲೇ ದಾಖಲಾಗಿವೆ.
ಕೇಂದ್ರ ಜಿಲ್ಲಾ ಡಿಸಿಪಿ ಶ್ವೇತಾ ಚೌಹಾಣ್ ಪ್ರಕಾರ, ಅಜಯ್ ಎಂಬ ಯುವಕ ನವೆಂಬರ್ 28ರ ಸಂಜೆ ಸಲ್ಮಾನ್ ಖಾನ್ ಅಭಿನಯದ ಅಂತಿಮ್ ಚಿತ್ರ ವೀಕ್ಷಣೆಗೆ ದೆಹಲಿಯ ಡಿಲೈಟ್ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇದೇ ವೇಳೆ ಚಾಂದಿನಿ ಮಹಲ್ ನಿವಾಸಿ ಸೈಯದ್ ಜಿಯಾವುದ್ದೀನ್ ಅಲಿಯಾಸ್ ಜುಗನು ಕೂಡಾ ಅಲ್ಲಿಗೆ ಆಗಮಿಸಿದ್ದ.
ಅಜಯ್ ಬಳಿ ಬಂದ ಸೈಯದ್ ಜಿಯಾವುದ್ದೀನ್ ತನಗೂ ಟಿಕೆಟ್ ಕೊಡಿಸುವಂತೆ ಕೇಳಿದ್ದಾರೆ. ಆದರೆ, ಅಜಯ್ ಟಿಕೆಟ್ ಕೊಡಿಸಲು ನಿರಾಕರಿಸಿದ ಕಾರಣ ಸೈಯದ್ ಜಿಯಾವುದ್ದೀನ್ ಅಜಯ್ನ ಸೊಂಟಕ್ಕೆ ಚುಚ್ಚಿ, ಪರ್ಸ್ ಕದ್ದು ಪರಾರಿಯಾಗಿದ್ದಾರೆ.
ಅಕ್ಕಪಕ್ಕದವರು ಅಜಯ್ ಸಹಾಯಕ್ಕೆ ಬಂದಿದ್ದು, ಗಾಯಾಳುವನ್ನು ಲೋಕನಾಯಕ ಜಯಪ್ರಕಾಶ ನಾರಾಯಣ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಅಜಯ್ ಬದುಕುಳಿದಿದ್ದು, ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕಳವು ಮಾಡಿದ್ದ ಪರ್ಸ್ ಮತ್ತು ಚಾಕುವನ್ನು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ: ‘ಬಡವ ರಾಸ್ಕಲ್’ ಚಿತ್ರದ ಪ್ರಚಾರ ಮಾಡ್ತಿದ್ದಾರೆ ಅಭಿಮಾನಿಗಳು!