ನವ ದೆಹಲಿ: ದೆಹಲಿಯ ವಿಕಾಸ್ ನಗರ ಪ್ರದೇಶದಲ್ಲಿ ವಾಹನ ನಿಲುಗಡೆ ವಿಚಾರವಾಗಿ 42 ವರ್ಷದ ವ್ಯಕ್ತಿಯೊಬ್ಬರ ಮೇಲೆ ಆತನ ನೆರೆಮನೆಯ ವ್ಯಕ್ತಿಯೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಆರೋಪಿ ವಿಕಾಸ್ ನಗರದ ನಿವಾಸಿ ಆಶಿಶ್ (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿದ ಹೊರ ಜಿಲ್ಲೆ ಉಪ ಪೊಲೀಸ್ ಕಮಿಷನರ್ (ಡಿಸಿಪಿ) ಸಮೀರ್ ಶರ್ಮಾ, ರಣಹೋಲಾ ಪೊಲೀಸ್ ಠಾಣೆಯಲ್ಲಿ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ಅಕ್ಟೋಬರ್ 17 ರಂದು ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಗಾಯಗೊಂಡಿದ್ದ ಶೇರ್ ಸಿಂಗ್ ಎಂಬಾತನನ್ನು ಆಶೀರ್ವಾದ್ ನರ್ಸಿಂಗ್ ಹೋಂ ಗೆ ದಾಖಲಿಸಲಾಯಿತು. ಗಾಯಾಳು ವ್ಯಕ್ತಿಗೆ ತಲೆಯಲ್ಲಿ ಗುಂಡಿನ ದಾಳಿಯಿಂದ ಗಾಯವಾಗಿತ್ತು. ಸದ್ಯ ಚಿಕಿತ್ಸೆಯ ನಂತರ ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ 7 ಗಂಟೆಗೆ ತನ್ನಅಂಗಡಿಯ ಮುಂದೆ ಕುಳಿತಿದ್ದಾಗ ತನ್ನ ನೆರೆಮನೆಯ ಆಶಿಶ್ ಎಂಬಾತ ಗುಂಡು ಹಾರಿಸಿದ್ದಾನೆ ಎಂದು ಸಿಂಗ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ಮತ್ತು 27 ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಘಟನೆ ನಡೆದ 24 ಗಂಟೆಗಳಲ್ಲಿ ಪೊಲೀಸ್ ತಂಡವು ಆಶಿಶ್‌ನನ್ನು ಗಂಡಾ ನಾಲಾದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಪಾರ್ಕಿಂಗ್ ವಿಷಯದಲ್ಲಿ ಈ ಗಲಾಟೆ ಸಂಭವಿಸಿದೆ. ಅಲ್ಲದೇ ಶೇರ್ಸಿಂಗ್ ತಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡುತ್ತಿದ್ದ ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ಕೂಡ ಆರೋಪಿ ಗುಂಡು ಹಾರಿಸಿದ್ದಾನೆ. ಈತ ಈ ಕೃತ್ಯಕ್ಕಾಗಿ ತನ್ನ ಸ್ನೇಹಿತರೊಬ್ಬರಿಂದ ಕಂಟ್ರಿ ಮೇಡ್ ಪಿಸ್ತೂಲ್ ಖರೀದಿಸಿದ್ದ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ: ಕಾರು ನಿಲ್ಲಿಸುವ ವಿಚಾರಕ್ಕೆ ಗಲಾಟೆ: ಬಿಜೆಪಿ ನಾಯಕನಿಂದ ಮಹಿಳೆ ಮೇಲೆ ಹಲ್ಲೆ ಆರೋಪ