ಧಮ್ತಾರಿ/ಕೊರ್ಬಾ, ಛತ್ತೀಸ್ಗಢ: ಧಮ್ತಾರಿ ಜಿಲ್ಲೆಯ ಕುರುಡು ಎಂಬಲ್ಲಿ 60 ವರ್ಷದ ಆರೋಪಿಯೊಬ್ಬ ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಮಹಿಳೆಗೆ 5000 ರೂಪಾಯಿ ಸಾಲವಾಗಿ ನೀಡಿದ್ದಾನೆ. ಮಹಿಳೆ ಸಾಲವನ್ನು ಹಿಂದಿರುಗಿಸಲು ವಿಫಲವಾಗಿದ್ದಾರೆ. ಹೀಗಾಗಿ ಆರೋಪಿಯು ಮಹಿಳೆಯ ಅಪ್ರಾಪ್ತ ಮಗಳಿಗೆ ಬೆದರಿಕೆ ಹಾಕಿ ಸತತ ಮೂರು ತಿಂಗಳ ಕಾಲ ಅತ್ಯಾಚಾರ ಎಸಗಿರುವುದು ಬೆಳಕಿಗೆ ಬಂದಿದೆ.
ಬಾಲಕಿ ಗರ್ಭಿಣಿಯಾದ ಬಳಿಕ ಇಡೀ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ 13 ವರ್ಷದ ಬಾಲಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಳು. ಇದೇ ವೇಳೆ, ಈ ಪ್ರಕರಣದಲ್ಲಿ ಬಾಲಕ ಸೇರಿದಂತೆ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ.
ಸಾಲ ವಾಪಸ್ ನೀಡದಿದ್ದಕ್ಕೆ ಅತ್ಯಾಚಾರ: ಕುರುಡು ಪೊಲೀಸ್ ಠಾಣೆ ಅಧಿಕಾರಿ ಮಾತನಾಡಿ, ಸಂತ್ರಸ್ತೆಯ ತಾಯಿ 2022ರ ಅಕ್ಟೋಬರ್‌ನಲ್ಲಿ ಆರೋಪಿಯಿಂದ 5 ಸಾವಿರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಆಗಿನಿಂದಲೂ ಆರೋಪಿಗೆ ಸಾಲ ಪಡೆದಿದ್ದ ಮಹಿಳೆಯ ಮಗಳ ಮೇಲೆ ಕೆಟ್ಟ ದೃಷ್ಟಿ ಇತ್ತು. ಹೀಗಾಗಿ ಸಾಲ ಪಡೆದ ಮಹಿಳೆ ನನ್ನ ಹಣವನ್ನು ಹಿಂದುರುಗಿಸುವಂತೆ ಒತ್ತಡ ಹಾಕುತ್ತಿದ್ದನು. ಅಷ್ಟೇ ಅಲ್ಲ ಆರೋಪಿಯು ಆಕೆಯ ಅಪ್ರಾಪ್ತ ಮಗಳನ್ನು ತನ್ನ ಮನೆಗೆ ಕರೆದು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಮಗಳು ಮೂರು ತಿಂಗಳ ಗರ್ಭಿಣಿಯಾದ ಬಳಿಕ ಈ ವಿಷಯ ಮನೆಯಲ್ಲಿ ತಿಳಿದಿದೆ. ಕೂಡಲೇ ಸಂತ್ರಸ್ತೆ ತಾಯಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳು ಹೇಳುವುದೇನು?: ಸಂತ್ರಸ್ತೆ ತಾಯಿ ದೂರು ನೀಡಿದ ತಕ್ಷಣ ಧಮ್ತಾರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಠಾಕೂರ್ ಅವರಿಗೆ ಮಾಹಿತಿ ನೀಡಲಾಗಿತ್ತು. ಅವರು ಅಪ್ರಾಪ್ತರ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ನಾವು ತಕ್ಷಣ ಕ್ರಮ ಕೈಗೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನದ ಮೇಲೆ ಜೈಲಿಗೆ ಕಳುಹಿಸಲಾಗಿದೆ ಎಂದರು.
ಓದಿ : ವಿಜಯಪುರದಲ್ಲಿ ಮಾನಸಿಕ ಅಸ್ವಸ್ಥೆ ಮೇಲೆ ಅತ್ಯಾಚಾರ .. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಬಂಧನ
ಮಗುವಿಗೆ ಜನ್ಮ ನೀಡಿದ ಬಾಲಕಿ: 13 ವರ್ಷದ ಅತ್ಯಾಚಾರ ಸಂತ್ರಸ್ತೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಕಳೆದ ವರ್ಷ ಜೂನ್ ತಿಂಗಳದಲ್ಲಿ ಸಂತ್ರಸ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅಪ್ರಾಪ್ತ ವಯಸ್ಕ ಸೇರಿದಂತೆ ಇನ್ನಿಬ್ಬರು ಯುವಕರು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಛತ್ತೀಸ್‌ಗಢದಲ್ಲಿ ಈ ದುಷ್ಕೃತ್ಯ ನಡೆದಿದೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ ತಲೆಮರೆಸಿಕೊಂಡಿದ್ದಾರೆ.
ಒಂಬತ್ತು ತಿಂಗಳ ಹಿಂದೆ ಅಪ್ರಾಪ್ತೆಯನ್ನು ಮೂವರು ಹೊರಗೆ ಕರೆದೊಯ್ದಿದ್ದರು. ಬಳಿಕ ಆಕೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದರು. ಈ ಸಂಗತಿ ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದರು. ಇದರಿಂದ ಬಾಲಕಿ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಜನವರಿ 26ರಂದು ಬಾಲಕಿ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಳಿಕ ಈ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿ ತಂದೆ ಪೊಲೀಸ್ ಠಾಣೆ ತೆರಳಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಪ್ರಮುಖ ಆರೋಪಿಗಾಗಿ ಶೋಧ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.