ಹೈದರಾಬಾದ್: ಗ್ರಾಹಕರೊಬ್ಬರಿಗೆ ಬಿಗ್ ಶಾಕ್ ನೀಡಿದ್ದ ಭಾರ್ತಿ ಏರ್‌ಟೆಲ್ ಆಡಳಿತ ಮಂಡಳಿ ಸಿಬ್ಬಂದಿಗೆ ಗ್ರಾಹಕ ಆಯೋಗ ದಂಡ ವಿಧಿಸಿದೆ. ಏರ್‌ಟೆಲ್‌ನ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳ ಯೋಜನೆ ಬಗ್ಗೆ ನೀಡಿದ ತಪ್ಪು ಮಾಹಿತಿಯಿಂದಾಗಿ ಗ್ರಾಹಕನೊಬ್ಬನಿಗೆ 1,41,770 ಬಿಲ್ ಬಂದಿದೆ. ಈ ಕುರಿತು ಹೈದರಾಬಾದ್ ಜಿಲ್ಲಾ ಗ್ರಾಹಕ ಆಯೋಗದಲ್ಲಿ ಗ್ರಾಹಕ ದೂರು ದಾಖಲಿಸಿದ್ದು, ವಿಚಾರಣೆ ನಡೆಸಿದ ಅಧಿಕಾರಿಗಳು 50 ಸಾವಿರ ರೂಪಾಯಿಯನ್ನು ಗ್ರಾಹಕನಿಗೆ ಪರಿಹಾರವಾಗಿ ನೀಡಲು ಆದೇಶಿಸಿದೆ.
ಹೈದರಾಬಾದ್‌ನ ಲೋವರ್ ಟ್ಯಾಂಕ್ ಬಂಡ್‌ನಲ್ಲಿರುವ ಜಲವಾಯು ಟವರ್ಸ್ ಬಳಿ ನೆಲೆಸಿರುವ ನಿವೃತ್ತ ವಿಂಗ್ ಕಮಾಂಡರ್ ಸಮರ್ ಚಕ್ರವರ್ತಿ ಮತ್ತು ಅವರ ಪತ್ನಿ ಬಹಾಮಾಸ್‌ಗೆ ಹೋಗಲು ಬಯಸಿದ್ದರು. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳಿಗಾಗಿ ಅವರು ಭಾರ್ತಿ ಏರ್‌ಟೆಲ್ ಅನ್ನು ಸಂಪರ್ಕಿಸಿದ್ದರು. ಬೇಗಂಪೇಟೆಯಲ್ಲಿರುವ ಏರ್‌ಟೆಲ್‌ನ ಸೇವಾ ಕೇಂದ್ರಕ್ಕೆ ತೆರಳಿದ್ದ ಅವರು 2014ರಿಂದ ಪೋಸ್ಟ್‌ಪೇಯ್ಡ್ ಸೇವೆಯನ್ನು ಬಳಸುತ್ತಿರುವುದಾಗಿ ಹೇಳಿದ್ದಾರೆ.
ಒಂದು ವೇಳೆ ಅಮೆರಿಕ ಪ್ಲಾನ್-ಬಿ ಸೇವೆಯನ್ನು ಬಳಸಿದರೆ ಬಹಾಮಾಸ್‌ನಲ್ಲಿ ನೆಟ್‌ವರ್ಕ್ ಕೆಲಸ ಮಾಡುತ್ತದೆ ಎಂದು ಏರ್‌ಟೆಲ್ ಸೇವಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ. ನಂತರ ಸಮರ್ ಚಕ್ರವರ್ತಿ ಜೂನ್ 27, 2018ರಂದು ನ್ಯೂಜೆರ್ಸಿಯನ್ನು ತಲುಪಿ, 3,999+149 ರೂಪಾಯಿಯ ಪ್ಯಾಕ್ ಅನ್ನು ರೀಚಾರ್ಜ್ ಮಾಡಿದ್ದಾರೆ. ಈ ಪ್ಯಾಕ್‌ಗೆ 500 ಹೊರಹೋಗುವ ಕರೆಗಳು, 5GB ಡೇಟಾ, ಅನಿಯಮಿತ ಎಸ್ಎಂಎಸ್ ಮತ್ತು ಅನಿಯಮಿತ ಒಳಬರುವ ಕರೆಗಳು ಬರಲಿವೆ ಎಂದು ಸಂದೇಶ ಬಂದಿದೆ.
ಹೊಸ ಯೋಜನೆಯನ್ನು ಸಕ್ರಿಯಗೊಳಿಸಿದಾಗಿನಿಂದ ಹಲವಾರು ಬಾರಿ ಅಂತಾರಾಷ್ಟ್ರೀಯ ರೋಮಿಂಗ್ ಸೇವೆಗಳನ್ನು ಪಡೆಯುವುದು ಸಾಧ್ಯವಾಗಲಿಲ್ಲ. ಪದೇ ಪದೆ ಸಂಪರ್ಕ ಕಡಿತಗೊಂಡಿದೆ ಎಂದು ಸಮರ್ ಚಕ್ರವರ್ತಿ ಏರ್‌ಟೆಲ್ ಸೇವಾ ಕೇಂದ್ರಕ್ಕೆ ದೂರು ನೀಡಿದ್ದರು. ನಂತರ ಬಹಮಾಸ್‌ನಲ್ಲಿರುವ ನಸ್ಸಾವ್‌ಗೆ ಆಗಮಿಸಿದಾಗ ಅವರಿಗೆ ಬಿಲ್ 1,41,770 ರೂಪಾಯಿ ಎಂಬ ಸಂದೇಶ ಅವರ ಮೊಬೈಲ್ಗೆ ಬಂದಿದೆ. ಮೋಜಿಗಾಗಿ ವಿದೇಶ ಪ್ರದೇಶ ಕೈಗೊಂಡಿದ್ದ ಸಮರ್ ಚಕ್ರವರ್ತಿ ಈ ವೇಳೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.
ಅವರು ಮತ್ತೆ ಏರ್‌ಟೆಲ್ ಸೇವಾ ಕೇಂದ್ರವನ್ನು ಸಂಪರ್ಕಿಸಿದ್ದಾರೆ. ಆದರೂ ಯೋಜನೆ ಸಕ್ರಿಯವಾಗಿಲ್ಲ. ಏರ್‌ಟೆಲ್ ಸೇವಾ ಪೂರೈಕೆದಾರರು ಅದೇ ಯೋಜನೆಯನ್ನು ಮತ್ತೊಮ್ಮೆ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇದರಿಂದ ಕಿರಿಕಿರಿಗೆ ಒಳಗಾದ ಸಮರ್ ಚಕ್ರವರ್ತಿ ಏರ್‌ಟೆಲ್‌ನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಕೆಲವು ಬಿಲ್ ಮೊತ್ತವನ್ನು ಕಡಿತಗೊಳಿಸುವುದಾಗಿ ಏರ್‌ಟೆಲ್ ಹೇಳಿದೆ. ಅವರ ಸೇವೆಗೆ ಕೇವಲ 28,000 ರೂ.ಗಳ ಸಾಲದ ಮಿತಿಯನ್ನು ಹೊಂದಿದ್ದು, ಬಿಲ್ ಹೇಗೆ ಆ ಮಿತಿಯನ್ನು ಮೀರಿದೆ ಎಂದು ಪ್ರಶ್ನಿಸಿ ಸಮರ್ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ನೀಡಿದ್ದಾರೆ. ವಿಚಾರಣೆ ನಡೆಸಿದ ಅಧಿಕಾರಿಗಳು 50 ಸಾವಿರ ರೂಪಾಯಿಯನ್ನು ಗ್ರಾಹಕನಿಗೆ ಪರಿಹಾರವಾಗಿ ನೀಡಲು ಆದೇಶಿಸಿದೆ.
ಇದನ್ನೂ ಓದಿ: ಬಹುಕೋಟಿ ಮೇವು ಹಗರಣ: ಕೆಲವೇ ಗಂಟೆಗಳಲ್ಲಿ ಜೈಲಿನಿಂದ ಹೊರಬರಲಿರುವ ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್