ಧನ್ಬಾದ್ (ಜಾರ್ಖಂಡ್): ನಿಮ್ಮೆಲ್ಲರಿಗೂ ದಶರಥ ಮಾಂಜಿಯ ಕತೆ ಗೊತ್ತಿದೆ. ಪತ್ನಿ ಹೆರಿಗೆ ನೋವಿನಿಂದಾಗಿ ಎತ್ತರದ ಬೆಟ್ಟ ಏರಲಾಗದೇ ಕೆಳಗೆ ಬಿದ್ದು ಸಾವನ್ನಪ್ಪಿದ್ದರು. ಇದರಿಂದ ಬೇಸರಗೊಂಡ ದಶರಥ ಮಾಂಜಿ ಆ ಬೆಟ್ಟವನ್ನೇ ಕರಗಿಸಿದ್ದ. ಆದ್ರೆ ಇಂದು ನಾವು ಹೇಳ ಹೊರಟ ಕತೆ ಸಹ ಅಂತಹದ್ದೇ. ಹೌದು ಧನಬಾದ್ನ ಫಾಗು ಮಹತೋ ಅವರ ಕತೆಯೂ ಹೀಗೆಯೇ ಇದೆ.
ತಂದೆಗೆ ಮಾತು ಕೊಟ್ಟ ರಾಮನಂತೆ ಅಪ್ಪನ ಆಸೆ ಈಡೇರಿಸಲು ಹಗಲು-ರಾತ್ರಿ ಭೂಮಿ ಅಗೆದು ನೀರು ತೆಗೆದಿದ್ದಾರೆ ಫಾಗು ಮಹತೋ. ಜಾರ್ಖಂಡ್ನ ಧನ್ಬಾದ್ ಜಿಲ್ಲೆಯ ಬಾಗ್ಮಾರಾದ ಗ್ರಾಮ ಪಾತಾಮಹೋಲ್ನಲ್ಲಿ ನಡೆದ ಘಟನೆ ಇದು. ಫಾಗು ಅವರ ತಂದೆ ಭರತ್ ತಮ್ಮ ಸಹೋದರರೊಂದಿಗೆ ಕೂಡು ಕುಟುಂಬದಲ್ಲಿ ವಾಸಿಸುತ್ತಿದ್ದರು. ಮೀನು ಸಾಕಾಣಿಕೆಯೇ ಈ ಕುಟುಂಬದ ಜೀವನಾಧಾರವಾಗಿತ್ತು.
ಒಂದು ದಿನ ಮೀನು ವಿತರಣೆಯ ಬಗ್ಗೆ ವಿವಾದ ಉಂಟಾಯಿತು. ಭರತ್‌ಗೆ ಕೊಳ ನೀಡಲು ಸಹೋದರರು ನಿರಾಕರಿಸಿದರು. ಆಗ ಭರತ್ ಕೊಳ ನೀವೇ ಇಟ್ಟುಕೊಳ್ಳಿ. ನನ್ನ ಮಗನಿಗಾಗಿ ನಾನು ಇನ್ನೊಂದು ಕೊಳ ಅಗೆಯುತ್ತೇನೆ ಎಂದು ಪಣತೊಟ್ಟರಂತೆ. ನನ್ನ ಮಗ ಮೀನು ಸಾಕಣೆ ಮಾಡುತ್ತಾನೆ, ಅದೂ ನಾನು ಅಗೆದ ಕೊಳದಲ್ಲಿಯೇ ಎಂದು ಹೇಳಿದ್ದರಂತೆ.
ನಿದ್ದೆಯಿಂದ ಎಚ್ಚರವಾದರೂ ಕೊಳ ಅಗೆದರು
ಭರತ್ 10 ವರ್ಷಗಳ ಕಾಲ ಅಗೆದರೂ ಕೊಳವನ್ನು ಮಾಡಲಾಗಲಿಲ್ಲ. ತಂದೆಯ ಮರಣದ ನಂತರ ಮಗ ಈ ಜವಾಬ್ದಾರಿಯನ್ನು ತೆಗೆದುಕೊಂಡರು. ಹಗಲು-ರಾತ್ರಿ ಎನ್ನದೇ ಭೂಮಿ ಅಗೆದು ಕೊಳ ನಿರ್ಮಿಸಿದರು. ಫಾಗು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಬಂದ ನಂತರ ಕೊಳ ಅಗೆಯುವ ಕಾರ್ಯದಲ್ಲಿ ತೊಡಗುತ್ತಿದ್ದರು.
ಹೀಗೆ ಅವಿರತ ಶ್ರಮದಿಂದ ಭೂಮಿ ಅಗೆದು ಕೊಳ ನಿರ್ಮಿಸಿದರು. ಮೀನು ಮತ್ತು ಬಾತುಕೋಳಿ ಸಾಕಣೆ ಮತ್ತು ಹೊಲಗಳಲ್ಲಿ ಕೊಳದ ನೀರಿನಿಂದ ನೀರಾವರಿ ಮಾಡಿದ್ದಾರೆ. ಕೆಲವೊಮ್ಮೆ ಅವರು ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಹೋಗಿ ಕೊಳ ಅಗೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ರಾತ್ರಿ ವೇಳೆ ನಿದ್ದೆಯಿಂದ ಎಚ್ಚರವಾದಗಲೆಲ್ಲ ಕೊಳ ನಿರ್ಮಿಸಲು ತೆರಳುತ್ತಿದ್ದರು.
ಈ ಹಳ್ಳಿಯ ಜನರು ಸಹ ಮಹತೋ ಅವರು ಕೊಳ ಅಗೆಯಲು ಪಟ್ಟ ಶ್ರಮವನ್ನು ಇಂದಿಗೂ ಸ್ಮರಿಸುತ್ತಾರೆ. ಈ ಕೊಳದ ನೀರಿನಿಂದ ಇಂದು ಅನೇಕ ಜನರು ಉಪಯೋಗ ಪಡೆಯುತ್ತಿದ್ದಾರೆ. ಫಾಗು ಮಹತೋ ಅವರ ದೃಢ ಇಚ್ಛಾಶಕ್ತಿ ಮತ್ತು ಪರಿಶ್ರಮ ಈ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.