ನಾಗ್ಪುರ (ಮಹಾರಾಷ್ಟ್ರ): ಕಾರ್‌ನ ಹೆಡ್ಲೈಟ್ನಿಂದಾಗಿ ಶುರುವಾದ ಜಗಳ ಒಬ್ಬ ವ್ಯಕ್ತಿಯ ಪ್ರಾಣವನ್ನೇ ಬಲಿ ಪಡೆದಿರುವ ಘಟನೆ ಗುರುವಾರ ರಾತ್ರಿ ನಾಗ್ಪುರದ ವಾಥೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಮಾತಾ ಮಂದಿರ ಪ್ರದೇಶದಲ್ಲಿ ನಡೆದಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ (ಎಸ್‌ಆರ್‌ಪಿಎಫ್) ಸಿಬ್ಬಂದಿ ನಿಖಿಲ್ ಗುಪ್ತಾ (30) ತನ್ನ ಸಹೋದರಿಯನ್ನು ಭೇಟಿಯಾಗಲು ಗುರುವಾರ ರಾತ್ರಿ ಮಾತಾ ಮಂದಿರ ಬಳಿ ಬಂದಿದ್ದರು. ಈ ವೇಳೆ ಗುಪ್ತಾ ಕಾರು ನಿಲ್ಲಿಸುವಾಗ ಹೆಡ್ಲೈಟ್ ಬೆಳಕು ಅದೇ ಪ್ರದೇಶದ ನಿವಾಸಿ ಮುರಳೀಧರ ರಾಮರಾವ್ ನೆವಾರೆ (54) ಅವರ ಮುಖಕ್ಕೆ ಬಿದ್ದಿದೆ.
ಇದರಿಂದ ಕಿರಿಕಿರಿ ಅನುಭವಿಸಿದ ನೆವಾರೆ, ಹೆಡ್ಲೈಟ್ ಬೆಳಕನ್ನು ಸ್ವಲ್ಪ ಸರಿಸುವಂತೆ ನಯವಾಗಿ ಹೇಳಿದ್ದಾರೆ. ಆದರೆ ಇಷ್ಟಕ್ಕೆ ಕೋಪಗೊಂಡ ಗುಪ್ತಾ ಜಗಳ ಪ್ರಾರಂಭಿಸಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿದೆ. ಇದೇ ಸಿಟ್ಟಿನಲ್ಲಿ ಗುಪ್ತಾ ಮುರಳೀಧರನಿಗೆ ಬಲವಾಗಿ ಕಪಾಳಕ್ಕೆ ಹೊಡೆದಿದ್ದಾರೆ. ಹೊಡೆತಕ್ಕೆ ಮುರಳೀಧರ ನೆವಾರೆ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ನಿಖಿಲ್ ಗುಪ್ತಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಪಿಟಿಐ)
ಅತ್ತೆಯಿಂದ ಸೊಸೆಯ ಮೇಲೆ ಆ್ಯಸಿಡ್ ದಾಳಿ (ಹಿಂದಿನ ಅಪರಾಧ ಪ್ರಕರಣ): ದೆಹಲಿಯ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ 22 ವರ್ಷದ ಮಹಿಳೆಯ ಮೇಲೆ ಆಕೆಯ ಅತ್ತೆ ಆ್ಯಸಿಡ್ ದಾಳಿ ಮಾಡಿರುವ ಘಟನೆ ಸೆ.21 ರಂದು ನಡೆದಿತ್ತು. ದಾಳಿಯಿಂದ ಮಹಿಳೆಯ ದೇಹದ ಶೇ.25ರಷ್ಟು ಭಾಗಕ್ಕೆ ಸುಟ್ಟ ಗಾಯಗಳಾಗಿತ್ತು. ಗಾಯಾಳುವನ್ನು ಸ್ಥಳೀಯ ಜೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೃತ್ಯ ಎಸಗಿದ ಅತ್ತೆ ಅಂಜಲಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಂಜಲಿ ಮತ್ತು ಕುಟುಂಬ ಸದಸ್ಯರು ಪರಾರಿಯಾಗಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ, ದೆಹಲಿಯ ಸಂತ ನಗರ ಪ್ರದೇಶದಲ್ಲಿ ಅಂಜಲಿಯನ್ನು ಬಂಧಿಸಿದ್ದರು.
ನ್ಯೂ ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323, 326A, 34ರ ಅಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಮಹಿಳೆಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. 6 ತಿಂಗಳ ಮಗು ಕೂಡ ಇದೆ. ಕುಟುಂಬದೊಂದಿಗೆ ನ್ಯೂ ಉಸ್ಮಾನ್‌ಪುರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆಗಾಗ್ಗೆ ಅತ್ತೆಯ ಜೊತೆ ಜಗಳವಾಗುತಿತ್ತು. ಇದರಿಂದ ಬೇಸತ್ತ ಸಂತ್ರಸ್ತೆ ತನಗೆ ಮತ್ತು ತನ್ನ ಮಗಳಿಗೆ ಅತ್ತೆಯ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿತ್ತು. ಎರಡೂ ಕುಟುಂಬದವರು ವಿಚಾರಣೆಗೆ ಹಾಜರಾಗಿದ್ದರು. ಇದರಿಂದ ಕೋಪಗೊಂಡ ಆರೋಪಿ ಅಂಜಲಿ ಸೆಪ್ಟೆಂಬರ್ 20 ರಂದು ಸಂಜೆ 5:30ರ ಸುಮಾರಿಗೆ ತನ್ನ ಸೊಸೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಳು.
ಇದನ್ನೂ ಓದಿ: ಬಿಹಾರ: ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ, ಮೂತ್ರ ಕುಡಿಸಿ ವಿಕೃತಿ