ನಿಜಾಮಾಬಾದ್: ಕಣ್ಣು ಮುಂದೆ ಚೆನ್ನಾಗಿದ್ದ ಮಗ ವಿಪರೀತ ಜ್ವರದಿಂದ ನರಳಿ-ನರಳಿ, ನೋಡ ನೋಡುತ್ತಲೇ ಉಸಿರು ಚೆಲ್ಲಿದ ಘಟನೆ ನಿಜಾಮಾಬಾದ್ ಜಿಲ್ಲೆಯ ರೆಂಜಲ್ ತಾಲೂಕಿನಲ್ಲಿ ನಡೆದಿದೆ.
ಬೋರ್ಲಾಂ ಗ್ರಾಮದ ನಿವಾಸಿ ಅಶೋಕ್ ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಕೋವಿಡ್ ಬಂದಿರಬಹುದೇ ಎಂಬ ಸಂಶಯದಿಂದ ತಾಯಿ ಮತ್ತು ಆತನ ಸಹೋದರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆ ಮಾಡಿಸಿದರು. ಆಗ ಕೋವಿಡ್ ವರದಿ ನೆಗೆಟಿವ್ ಬಂದಿದೆ.
ಆದ್ರೆ ಅಶೋಕ್‌ಗೆ ಉಸಿರಾಟದ ತೊಂದರೆ ಮತ್ತೆ ಹೆಚ್ಚಾಗತೊಡಗಿದ್ದು, ಕುಟುಂಬದ ಮನವಿ ಮೇಲೆ ಸಿಬ್ಬಂದಿ ಮತ್ತೊಮ್ಮೆ ಕೋವಿಡ್ ವರದಿಗೆ ಒಳಪಡಿಸಿದ್ದಾರೆ. ಕೋವಿಡ್ ವರದಿ ಬರೋದು ಸ್ವಲ್ಪ ತಡವಾಗುತ್ತೆ ಎಂದು ಸಿಬ್ಬಂದಿ ಅಶೋಕ್ ಮತ್ತು ಆತನ ಕುಟುಂಬಕ್ಕೆ ತಿಳಿಸಿದ್ದಾರೆ. ಈ ವೇಳೆ ಅಶೋಕ್ ಕುಟುಂಬ ಅಲ್ಲಿಯೇ ಪಕ್ಕದಲ್ಲಿದ್ದ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು.
ಕುಳಿತುಕೊಂಡ ಸ್ವಲ್ಪ ಸಮಯಕ್ಕೆನೇ ಮಗ ಅಶೋಕ್ ಉಸಿರಾಡಲು ಕಷ್ಟಪಡುತ್ತಿರುವುದನ್ನು ತಾಯಿ ಗಮನಿಸಿದ್ದಾಳೆ. ಏನೂ ತೋಚದಾದ ಆಕೆ ಸಹಾಯಕ್ಕೆ ಯಾರನ್ನಾದರೂ ಕರೆಯುವ ಇರಾದೆ ತೋರುತ್ತಾಳೆ. ಆದರೆ, ಅಷ್ಟರಲ್ಲೇ ಅಶೋಕ್ ಪ್ರಾಣಪಕ್ಷಿ ಹಾರಿ ಹೋಗಿದೆ. ತನ್ನ ಕಣ್ಣ ಮುಂದೆಯೇ ಮಗ ಪ್ರಾಣ ಬಿಟ್ಟಿರುವುದು ಆಕೆಗೆ ಜೀರ್ಣಿಸಲಾಗದೆ ಸ್ತಬ್ದಳಾಗುತ್ತಾಳೆ.
ತೀವ್ರ ಜ್ವರ ಅಥವಾ ಹೃದಯಾಘಾತದಿಂದ ಅಶೋಕ್ ಸಾವನ್ನಪ್ಪಿರಬಹುದೆಂದು ಆರೋಗ್ಯ ಸಿಬ್ಬಂದಿ ಹೇಳಿದ್ದಾರೆ. ಮಗ ಜೀವನದ ಪ್ರಯಾಣ ನಿಲ್ಲಿಸಿರುವುದನ್ನು ಕಂಡು, 'ಮೇಲೆದ್ದೇಳಪ್ಪಾ... ಎದ್ದೇಳು, ಮನೆಗೆ ಹೋಗೋಣ.. ಹೆಂಡ್ತಿ, ಮಕ್ಕಳು ನಿನಗೋಸ್ಕರ ಕಾಯುತ್ತಿರುತ್ತಾರೆ..' ಎಂದು ರೋಧಿಸುತ್ತಿದ್ದ ಆರ್ತನಾದ ಅಲ್ಲಿದ್ದವರ ಕಣ್ಣಾಲಿಗಳಲ್ಲಿ ನೀರು ತರಿಸುವಂತಿತ್ತು.