ಮಧುರೈ: ಜಿಲ್ಲೆಯ ಅಲಂಗನಲ್ಲೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆ ವೇಳೆ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.
ಅಲಂಗನಲ್ಲೂರಿನಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಕ್ರೀಡೆಗೆ ನವಮಣಿ ಎಂಬ ವ್ಯಕ್ತಿ ತನ್ನ ಸ್ನೇಹಿತನ ಗೂಳಿಯನ್ನು ತೆಗೆದುಕೊಂಡು ಬಂದಿದ್ದ. ಅನಿರೀಕ್ಷತವಾಗಿ ಗೂಳಿ ಇರಿತದಿಂದ ನವಮಣಿ ಗಂಭೀರವಾಗಿ ಗಾಯಗೊಂಡಿದ್ದನು. ಮೈದಾನದಲ್ಲಿರುವ ಪ್ರಥಮ ಚಿಕಿತ್ಸಾ ಶಿಬಿರದಲ್ಲಿ ಆರಂಭದಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗಿತ್ತು.
ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಧುರೈ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ನವಮಣಿ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾನೆ.
ಮಧುರೈ ಜಿಲ್ಲೆಯ ಅಲಂಗನಲ್ಲೂರಿನಲ್ಲಿ ಸುಗ್ಗಿಯ ಉತ್ಸವ ಪೊಂಗಲ್ ಸಂದರ್ಭದಲ್ಲಿ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು - ಬುಲ್ ಟ್ಯಾಮಿಂಗ್ ಕ್ರೀಡೆ ಆಯೋಜಿಸಲಾಗಿತ್ತು. ಕ್ರೀಡೆಯಲ್ಲಿ ಗೆದ್ದ ವಿಜೇತರಿಗೆ ತಮಿಳುನಾಡಿನ ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಬಹುಮಾನ ವಿತರಿಸುವ ಮೂಲಕ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಮಿಳುನಾಡಿನ ಸುಗ್ಗಿಯ ಉತ್ಸವ ಪೊಂಗಲ್ ಸಂದರ್ಭದಲ್ಲಿ ಏರ್ಪಡಿಸಲಾಗಿದ್ದ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಲ್ಲಿ ಒಟ್ಟು 800 ಎತ್ತುಗಳು ಮತ್ತು 615 ಬುಲ್ ಟ್ಯಾಮರ್‌ಗಳು ಭಾಗವಹಿಸಿದ್ದರು.
ಮಧುರೈನಲ್ಲಿ ನಡೆದ ಸ್ಪರ್ಧೆಯ ವೇಳೆ ಪ್ರೇಕ್ಷಕರು, ಆಟಗಾರರು ಸೇರಿ 58 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.