ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಪ್ರಸಿದ್ಧ ಕೇದಾರನಾಥ ದೇವಸ್ಥಾನದ ಆವರಣದೊಳಗೆ ವ್ಯಕ್ತಿಯೊಬ್ಬ ಸಾಕು ಶ್ವಾನವನ್ನು ತೆಗೆದುಕೊಂಡು ಹೋಗಿ ಅವರ ಕಾಲುಗಳನ್ನು ನಂದಿ ವಿಗ್ರಹಕ್ಕೆ ಸ್ಪರ್ಶಿಸಿ ಪ್ರಾರ್ಥನೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಬದರಿನಾಥ್-ಕೇದಾರನಾಥ ದೇವಾಲಯದ ಸಮಿತಿಯ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ ಎಂದು ರುದ್ರಪ್ರಯಾಗ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ಅಗರ್ವಾಲ್ ತಿಳಿಸಿದ್ದಾರೆ.
ದೇವಸ್ಥಾನದ ಆವರಣದಲ್ಲಿ ವ್ಯಕ್ತಿಯೊಬ್ಬ ಶ್ವಾನದೊಂದಿಗೆ ನಡೆದುಕೊಂಡು ಹೋಗುತ್ತಿರುವುದನ್ನು ಮತ್ತು ದೇವಾಲಯದ ಹೊರ ಭಾಗದಲ್ಲಿರುವ ನಂದಿ ವಿಗ್ರಹವನ್ನು ಪೂಜಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿ ಶ್ವಾನದ ಕಾಲುಗಳನ್ನು ಹಿಡಿದು ನಂದಿ ವಿಗ್ರಹಕ್ಕೆ ಮುಟ್ಟಿಸುತ್ತಿರುವ ದೃಶ್ಯ ದಾಖಲಾಗಿದೆ. ಅಲ್ಲದೇ, ಪೂಜೆ ಸಲ್ಲಿಸುತ್ತಿರುವ ವೇಳೆಯೂ ಆ ವ್ಯಕ್ತಿ ಶೂ ಧರಿಸಿದ್ದು, ಇದರಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೇವಾಲಯದ ಸಮಿತಿ ಹೇಳಿದೆ.
ಈ ಬಗ್ಗೆ ಸಮಿತಿಯ ದೂರು ನೀಡಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸಲು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಪ್ಪನ ಹಣ ಕದ್ದು, ಕೋಟಾ ನೋಟು ಇಟ್ರು.. 25 ದಿನದಲ್ಲಿ 4 ಲಕ್ಷ ಖರ್ಚು ಮಾಡಿದ್ರು 8-9 ವರ್ಷದ ಅಣ್ತಮ್ಮ!